
ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿದ ದುರಂತಕ್ಕೆ ಸಂಭವಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ತನ್ನ ಪ್ರತಿಕ್ರಿಯೆ ನೀಡಿದೆ.
ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್ ಸಿಬಿ ತಂಡ 18 ವರ್ಷಗಳ ಬಳಿಕ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿದಿದ್ದು, ಇದೇ ಖುಷಿಯನ್ನು ಬೆಂಗಳೂರಿನಲ್ಲಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿತ್ತು.
ಆಟಗಾರರ ಬಿಸಿ ಶೆಡ್ಯೂಲ್ ನಡುವೆಯೂ ಆರ್ ಸಿಬಿ ತಂಡ ಆಟಗಾರರನ್ನು ಬೆಂಗಳೂರಿಗೆ ಕರೆತಂದು ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಆದರೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣ ಇದೀಗ ಸೂತಕ ಮನೆಯಂತಾಗಿದೆ.
ದುರಂತದ ಬಳಿಕ ಆರ್ ಸಿಬಿ ಮೊದಲ ಪ್ರತಿಕ್ರಿಯೆ
ಇನ್ನು 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಎಕ್ಸ್ ಖಾತೆಯನ್ನು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯಲ್ಲಿ, 'ಇಂದು ಮಧ್ಯಾಹ್ನ ತಂಡದ ಆಗಮನದ ನಿರೀಕ್ಷೆಯಲ್ಲಿ ಬೆಂಗಳೂರಿನಾದ್ಯಂತ ಸಾರ್ವಜನಿಕ ಸಭೆಗಳ ಕುರಿತು ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿರುವ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಪೀಡಿತ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ.
ಅಂತೆಯೇ, 'ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ತಿದ್ದುಪಡಿ ಮಾಡಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಬೆಂಬಲಿಗರನ್ನು ನಾವು ಒತ್ತಾಯಿಸುತ್ತೇವೆ ಎಂದು ಮನವಿ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ಇನ್ನು ಇದೇ ವಿಚಾರವಾಗಿ ವಿರಾಟ್ ಕೊಹ್ಲಿ ಕೂಡ ಪೋಸ್ಟ್ ಮಾಡಿದ್ದು, "ಮಾತೇ ಬರುತ್ತಿಲ್ಲ.. ಹೃದಯ ಒಡೆದಿದೆ' ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement