
ಬೆಂಗಳೂರು: ಕುಣಿಗಲ್ ತಾಲೂಕು ಪಾಲಿನ ಹೇಮಾವತಿ ನೀರನ್ನು ಕೊಂಡೊಯ್ಯಲು ಲಿಂಕ್ ಕೆನಾಲ್ ಯೋಜನೆ ರೂಪಿಸಲಾಗಿದೆ. ಇದರಿಂದ ಬೇರೆ ತಾಲೂಕುಗಳಿಗೆ ಅನ್ಯಾಯ ಆಗುವುದಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ದಾರಿತಪ್ಪಿಸಿ, ಯೋಜನೆಗೆ ವಿರೋಧ ಮಾಡುತ್ತಿದ್ದಾರೆ" ಎಂದು ಕುಣಿಗಲ್ ಶಾಸಕ ಹೆಚ್.ಡಿ. ರಂಗನಾಥ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತುಮಕೂರಿನ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿಚಾರವಾಗಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಕುಣಿಗಲ್ ಕ್ಷೇತ್ರದ ಶಾಸಕನಾಗಿ ತುಮಕೂರು ಜಿಲ್ಲೆಯ ಮಗನಾಗಿ ಜಿಲ್ಲೆ ರೈತರ ಹಿತಕಾಯುವುದು ನನ್ನ ಜವಾಬ್ದಾರಿ. ಹಾಸನದಿಂದ ತುಮಕೂರಿಗೆ ಹೇಮಾವತಿ ನೀರು ತರುವಲ್ಲಿ ವೈ.ಕೆ.ರಾಮಯ್ಯ, ಹುಚ್ಚಮಾಸ್ತೀಗೌಡ ಅವರ ಪಾತ್ರ ಬಹಳ ದೊಡ್ಡದಿದೆ" ಎಂದು ತಿಳಿಸಿದರು.
"ಕುಣಿಗಲ್ ತಾಲೂಕಿಗೆ ನೀರು ಪೂರೈಸಲು ತುಮಕೂರು ವಿಭಾಗ ಕಾಲುವೆ ಮಾಡಲಾಯಿತು. ಆನಂತರ ಜಿಲ್ಲೆಯ ಇತರೆ ತಾಲೂಕುಗಳ ಜತೆ ಸಹೋದರ ಭಾವನೆ ಮೇಲೆ ನೀರು ಹಂಚಿಕೊಳ್ಳಲಾಯಿತು. ಗುಬ್ಬಿ, ತುರುವೇಕೆರೆ, ಸಿರಾ, ಚಿಕ್ಕನಾಯಕನ ಹಳ್ಳಿ, ಕೊರಟಗೆರೆ, ತುಮಕೂರು ಗ್ರಾಮಾಂತರ ತಾಲೂಕಿನ ಜನರಿಗೆ ಕುಡಿಯುವ ನೀರು ಹಂಚಿಕೊಳ್ಳಲಾಗುತ್ತಿದೆ. ತುಮಕೂರು ಬ್ರಾಂಚ್ ಕೆನಾಲ್ ಆದ ನಂತರ 47 ಏತ ನೀರಾವರಿ ಯೋಜನೆಗಳು ಬಂದಿವೆ. ಈ ಯೋಜನೆಗಳಿಗೆ ತುಮಕೂರಿನ ಯಾವುದೇ ರೈತರಾಗಲಿ, ಮುಖಂಡರಾಗಲಿ ವಿರೋಧ ವ್ಯಕ್ತಪಡಿಸಿಲ್ಲ" ಎಂದರು.
"ಬಿಜೆಪಿ ಸರ್ಕಾರ ನೀಡಿದ ಅಂಕಿ-ಅಂಶಗಳ ಪ್ರಕಾರವೇ ಕುಣಿಗಲ್ ತಾಲೂಕಿಗೆ ಸರಿಯಾಗಿ ನೀರು ಪೂರೈಕೆಯಾಗಿಲ್ಲ. ಕುಣಿಗಲ್ ತಾಲೂಕಿಗೆ ನಿಗದಿಯಾಗಿರುವುದು 3000 mcft ನೀರು. ಆದರೆ ಕಳೆದ 10 ವರ್ಷಗಳಲ್ಲಿ ಬಂದಿರುವ ಒಟ್ಟಾರೆ ನೀರಿನ ಪ್ರಮಾಣ 300-5೦0 mcft ಮಾತ್ರ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ 9 ಕೋಟಿ ವೆಚ್ಚದಲ್ಲಿ ಕಾಲುವೆ ಹೂಳೆತ್ತಲಾಯಿತು. ನಂತರವಷ್ಟೇ ಈ ನೀರು ಹರಿದಿದೆ" ಎಂದು ಹೇಳಿದರು.
"ಈ ಕಾಲುವೆ ಆಧುನೀಕರಣ ಮಾಡಿ, ಅಗಲೀಕರಣ ಮಾಡಿ ಎಂದು ಹೇಳುತ್ತಾರೆ. ಈಗಾಗಲೇ ಈ ಕಾಲುವೆಯನ್ನು ಅಗಲೀಕರಣ ಮಾಡಲಾಗಿದೆ. ಆದರೂ 500 mcft ಗೂ ಹೆಚ್ಚಿನ ನೀರು ಪಡೆಯಲು ಆಗುತ್ತಿಲ್ಲ. ಈ ಲಿಂಕ್ ಕೆನಾಲ್ ನಿಂದ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ರೈತರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದರು.
"ಈ ಯೋಜನೆಯಲ್ಲಿ 170 ಕಿ.ಮೀ ನೀರು ಹರಿಯುವ ಮಾರ್ಗದಲ್ಲಿ 100 ಗೇಟ್ ಗಳಿವೆ. ನಮಗೆ ಪ್ರತಿ ವರ್ಷ 15 ದಿನ ನೀರು ನೀಡಲು ಪ್ರಯತ್ನಿಸುತ್ತಾರೆ. ಗುಬ್ಬಿ, ತುರುವೇಕೆರೆ, ಸಿಎಸ್ ಪುರ, ಗ್ರಾಮಾಂತರ, ಸಿರಾ, ತುಮಕೂರು ನಗರದವರು ಕ್ರಮವಾಗಿ ತಮಗೆ ಬೇಕಾದ ನೀರು ಪಡೆಯುತ್ತಾರೆ. ಆನಂತರ ನಮಗೆ ನೀರು ಬಿಡುವಾಗ ರಾತ್ರಿ ವೇಳೆ ಅನಧಿಕೃತವಾಗಿ 50 ಸಾವಿರ ಪಂಪ್ ಸೆಟ್ಗಳ ಮೂಲಕ ನೀರು ಎತ್ತುತ್ತಿದ್ದಾರೆ. ಹೀಗಾಗಿ ಕುಣಿಗಲ್ ಗೆ ಸರಿಯಾಗಿ ನೀರು ಹರಿಯುತ್ತಿಲ್ಲ" ಎಂದರು.
"ನಮ್ಮ ಕುಣಿಗಲ್ ತಾಲೂಕು ತುಮಕೂರು ಜಿಲ್ಲೆಗೆ ಸೇರಿದೆಯೇ, ಇಲ್ಲವೇ? ನಾವು ನಿಮ್ಮ ಸಹೋದರರಲ್ಲವೇ?ನಮ್ಮ ರೈತರು ನಿಮ್ಮಂತೆ ಬದುಕಬಾರದೇ? ಎಂಬ ಪ್ರಶ್ನೆಯನ್ನು ತುಮಕೂರಿನ ರೈತರು ಹಾಗೂ ಸಂಘಟನೆ ನಾಯಕರಿಗೆ ಕೇಳುತ್ತೇನೆ. ನಮಗೆ ನೀರು ಕೊಡಲು ಇಷ್ಟವಿಲ್ಲದಿದ್ದರೆ ಅದನ್ನು ನೇರವಾಗಿ ಹೇಳಿ. ಮುಂದೆ ನೀರು ಕೊಡುತ್ತೇವೆ ಎಂದು ಹೇಳಿ ಆನಂತರ ಅಡ್ಡಿ ಮಾಡುವುದು ಬೇಡ. ಇದೇ ಸುರೇಶ್ ಗೌಡರು ರಾತ್ರೋರಾತ್ರಿ ಇಡಗೂರು ಗೇಟ್ ಅನ್ನು ಎಷ್ಟು ಬಾರಿ ಹೊಡೆದು ಹಾಕಿಲ್ಲ. ರಾತ್ರಿವೇಳೆ ಅವರೇ ಮುಂದೆನಿಂತು ಹೊಡೆಸಿ, ಬೆಳಿಗ್ಗೆ ಗೊತ್ತಾಗಲಿಲ್ಲ, ಇದನ್ನು ಮುಚ್ಚಿ ಎನ್ನುತ್ತಾರೆ. ಇಂತಹವರು 200 ಕಿ.ಮೀ ಉದ್ದ ನೀರು ಹರಿಯುವುದನ್ನು ಕಾಯುತ್ತಾರಂತೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಹೀಗಾಗಿ ತೆರೆದ ಕಾಲುವೆಗಿಂತ ನಮ್ಮ ಪಾಲಿನ ನೀರನ್ನು ಪೈಪ್ ಲೈನ್ ಮೂಲಕ ರಾಂಪುರ ಗೇಟ್ ನಿಂದ ಗುಬ್ಬಿ ಹಾಗೂ ಕುಣಿಗಲ್ ತಾಲೂಕು ಗಡಿವರೆಗೆ 34 ಕಿ.ಮೀ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ ಇವರು ಪೈಪ್ ಲೈನ್ ಅನ್ನು ರಾಮನಗರಕ್ಕೆ ಕೊಂಡೊಯ್ಯುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ" ಎಂದರು.
ಈ ಯೋಜನೆ ಕೇವಲ ಕುಣಿಗಲ್ ತಾಲೂಕಿನ ಜನರಿಗೆ ಮಾತ್ರ. ಅದೂ 3000mcft ನೀರನ್ನು ಮಾತ್ರ ತೆಗೆದುಕೊಂಡು ಹೋಗಲಾಗುತ್ತದೆ. ತುಮಕೂರು ಜಿಲ್ಲೆಗೆ 24.5 ಟಿಎಂಸಿ ನೀರು ಬರಬೇಕಾಗಿದ್ದು, ಇದನ್ನು ಪಡೆಯಲು ಕೆಲವೊಮ್ಮೆ ಹೋರಾಟ ಮಾಡಬೇಕಿದೆ. ಸುರೇಶ್ ಗೌಡ, ಕೃಷ್ಣಪ್ಪ ಅವರು ಈ ವಿಚಾರವಾಗಿ ಹೋರಾಟ ಮಾಡಲಿ. ತುಮಕೂರಿನ ಇತರೆ ತಾಲೂಕು ನೀರು ಪಡೆದ ನಂತರ ನಾನು ನನ್ನ ತಾಲೂಕಿಗೆ ನೀರನ್ನು ತೆಗೆದುಕೊಂಡು ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ" ಎಂದು ಪ್ರಶ್ನಿಸಿದರು.
"ನಾವು ಈ ಕಾಲುವೆಯಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗಿರುವ ಆಧುನಿಕ ತಂತ್ರಜ್ಞಾನದ ಸ್ಕಾಡಾ ಗೇಟ್ ಗಳನ್ನು ಅಳವಡಿಸಲಾಗುವುದು. ಈ ಕಾಲುವೆ ಮೂಲಕ ಎಷ್ಟು ನೀರು ತೆಗೆದುಕೊಂಡು ಹೋಗಲಾಗಿದೆ ಎಂಬುದರ ಬಗ್ಗೆ ಅಂಕಿ ಅಂಶಗಳನ್ನು ಯಾವುದೇ ರೈತರು, ಮುಖಂಡರಿಗೆ ಬೇಕಾದರೂ ನೀಡಲು ಸಿದ್ಧ" ಎಂದರು.
"ತುಮಕೂರಿನ ಗುಬ್ಬಿ, ತುರುವೇಕೆರೆ, ಗ್ರಾಮಾಂತರ, ಕುಣಿಗಲ್ ಕಾವೇರಿ ನದಿ ಪಾತ್ರಕ್ಕೆ ಸೇರಿವೆ. ವೈ.ಕೆ.ರಾಮಯ್ಯ, ಹುಚ್ಚಮಾಸ್ತೀಗೌಡರು ತುಮಕೂರು ಬ್ರಾಂಚ್ ಕೆನಾಲ್ ಅನ್ನು ಮಾಡಿಸಿದ್ದು ಕುಣಿಗಲ್ ತಾಲೂಕಿಗಾಗಿಯೇ. ಆದರೆ ಬೇರೆ ತಾಲೂಕಿನವರು ಕುಡಿಯಲು ನೀರು ಕೇಳಿದಾಗ ಕುಣಿಗಲ್ ತಾಲೂಕಿನ ಜನ ವಿರೋಧ ಮಾಡದೆ ಔದಾರ್ಯ ತೋರಿದರು. ಕಾವೇರಿ ಪಾತ್ರದಿಂದ ಕೃಷ್ಣಾ ಪಾತ್ರಕ್ಕೆ ನೀರು ತೆಗೆದುಕೊಂಡು ಹೋಗುವಾಗ ಯಾರೂ ಧ್ವನಿ ಎತ್ತಲಿಲ್ಲ? ಅದು ಕುಣಿಗಲ್ ತಾಲೂಕಿನ ದೊಡ್ಡತನ" ಎಂದು ತಿಳಿಸಿದರು.
"ಈ ಯೋಜನೆಗೆ ವಿರೋಧ ಮಾಡುತ್ತಿರುವುದು ನೀರಿಗಾಗಿ ಅಲ್ಲ, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು. ಇನ್ನು ಈ ಯೋಜನೆ ವಿಚಾರವಾಗಿ ಅನುಮಾನ ಇದ್ದರೆ ಎಲ್ಲಿಗೆ ಕರೆದರೂ ನಾನು ಹೋಗಿ ಸ್ಪಷ್ಟನೆ ನೀಡುತ್ತೇನೆ. ರಾಜಕೀಯ ನಾಯಕರ ಪ್ರಚೋದನೆಗೆ ರೈತರು ಒಳಗಾಗಬಾರದು. ನಿಮ್ಮ ಪ್ರಶ್ನೆ ಏನೇ ಇದ್ದರೂ ನಾನು ಉತ್ತರಿಸುತ್ತೇನೆ. ಎಲ್ಲಾ ತಾಲೂಕಿಗೆ ನಿಗದಿಯಾಗಿರುವ ನೀರನ್ನು ಕೊಡಿಸಲು ನಮ್ಮ ಸರ್ಕಾರ ಬದ್ಧವಿದೆ. ಅದೇರೀತಿ ಕುಣಿಗಲ್ ತಾಲೂಕಿಗೆ ನ್ಯಾಯ ಒದಗಿಸಿಕೊಡುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ" ಎಂದರು.
Advertisement