18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾಗ ಸಂಭವಿಸಿದ ಕಾಲ್ತುಳಿತದಲ್ಲಿ 10 ಮಂದಿ ಆರ್ ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ. ಟ್ರೋಫಿ ಗೆದ್ದ ತಂಡವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಸಾವಿರಾರg ಸಂಖ್ಯೆಯಲ್ಲಿ ಯುವಕ, ಯುವತಿಯರು ಬುಧವಾರ ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟ, ನೂಕುನುಗ್ಗಲಿನಿಂದ ಹಲವಾರು ಮಂದಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೌರಿಂಗ್ ಆಸ್ಪತ್ರೆಯಲ್ಲಿ ಆರು ಮಂದಿ ಮೃತಪಟ್ಟಿದ್ದರೆ ವೈದೇಹಿ ಆಸ್ಪತ್ರೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ವೈದೇಹಿ ಆಸ್ಪತ್ರೆಯಲ್ಲಿ 12 ಮಂದಿ ದಾಖಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದಿದ್ದ ಐಪಿಎಲ್ 2025ರ ಟೂರ್ನಿಯಲ್ಲಿ ಆರ್ ಸಿಬಿ ತಂಡ ಗೆಲುವು ಸಾಧಿಸಿತ್ತು. ಇಂದು ವಿಜಯೋತ್ಸವ ಆಚರಣೆಗೆ ಆರ್ ಸಿಬಿ ಆಟಗಾರರು ರಾಜ್ಯಕ್ಕೆ ಆಗಮಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಆಟಗಾರರನ್ನು HAL ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ಇಂದು ಸಂಜೆ ವಿಧಾನಸೌಧ ಮುಂಭಾಗದಲ್ಲಿ ರ್ಕಾರದ ಪರವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್ ಸೇರಿದಂತೆ ಎಲ್ಲಾ ಆಟಗಾರರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಸನ್ಮಾಸಿದರು. ವಿಧಾನಸೌಧದ ಹೊರಗೆ ಭಾರೀ ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಸೇರಿದ್ದು ಈ ದೃಶ್ಯವನ್ನು ಕಣ್ತುಂಬಿಕೊಂಡರು. ಅಷ್ಟರಲ್ಲೇ ಮಳೆ ಬಂದ ಕಾರಣ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ ಆಟಗಾರರನ್ನು ಬಸ್ನಲ್ಲಿ ಕಳುಹಿಸಲಾಯಿತು. ಇದಾದ ಬಳಿಕ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದು ಅಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿದಲ್ಲಿ 10 ಮಂದಿ ಆರ್ ಸಿಬಿ ಅಭಿಮಾನಿಗಳು ಮೃತಪಟ್ಟಿದ್ದು ಈ ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಜನಸಂದಣಿಯನ್ನು ನಿಯಂತ್ರಿಸಲು ಯಾವುದೇ ಸೂಕ್ತ ವ್ಯವಸ್ಥೆಗಳನ್ನು ಕೈಗೊಂಡಿರಲಿಲ್ಲ. ದುರಂತದಲ್ಲಿ ಅಮಾಯಕ ಜನರು ಸಾಯುತ್ತಿದ್ದರೆ ಅತ್ತ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಟಗಾರರ ಜೊತೆ ರೀಲ್ಸ್ ಶೂಟ್ ಮಾಡುತ್ತಿದ್ದರು ಎಂದು ಬಿಜೆಪಿ ಕಿಡಿಕಾರಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮತ್ತೊಂದೆಡೆ ಕಾಲ್ತುಳಿತ ದುರಂತದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು, ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದರು. ನಂತರ ಸಿದ್ದರಾಮಯ್ಯ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ದುರಂತದ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಆರ್‌ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಪೊಲೀಸರು ಶಕ್ತಿಮೀರಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಆದರೆ ಅತಿಯಾದ ಜನಸಂದಣಿ ಈ ದುರಂತಕ್ಕೆ ಕಾರಣ ಎಂದು ಹೇಳಿದರು.
ಐಪಿಎಲ್ ಫೈನಲ್ ನಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಸಂಭ್ರಮಾಚರಣೆ ವೇಳೆ ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಯುವಕ ಸಾವಿಗೀಡಾಗಿದ್ದಾನೆ. ವೆಂಕಟೇಶ ನಗರದ ನಿವಾಸಿ 21 ವರ್ಷದ ಅಭಿನಂದನ್ ಮೃತ ದುರ್ದೈವಿ. ಇನ್ನೊಂದು ಬೈಕ್ನಲ್ಲಿದ್ದ ಮಿಥುನ್ ಹಾಗೂ ಅಭಿಷೇಕ್ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಬಿಜಿಎಸ್ ಮೇಲೇತುವೆಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ದುರ್ಮರಣವನ್ನಪ್ಪಿದ್ದಾರೆ. ಮಂಡ್ಯ ಮೂಲದ ಆಕಾಶ್ ಮತ್ತು ಮಂಗಳೂರು ಮೂಲದ ಅಫ್ಜಲ್ ಮೃತಪಟ್ಟಿದ್ದಾರೆ. ಈಮಧ್ಯೆ, ಆರ್‌ಸಿಬಿ ತಂಡದ ಗೆಲುವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ ಕುಂಬಾರ್ ಎಂದು ಗುರುತಿಸಲಾಗಿದೆ.
Advertisement