RCB ವಿಜಯೋತ್ಸವ: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದ ನಮ್ಮ ಮೆಟ್ರೋ!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಬಳಿಕ ನಗರದಲ್ಲಿ ಸಂಭ್ರಮ ಮನೆ ಮಾಡಿತ್ತು. ಇದರ ಬೆನ್ನಲ್ಲೇ ವಿಜಯೋತ್ಸವದ ದಿನವಾದ ಜೂನ್.4ರಂದು ನಮ್ಮ ಮೆಟ್ರೋದಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
ಟ್ರೋಫಿ ಗೆದ್ದ ಆರ್'ಸಿಬಿ ಆಟಗಾರರು ನಗರದಲ್ಲಿ ವಿಜಯೋತ್ಸವದ ಪರೇಡ್ ಮಾಡುವುದಾಗಿ ಹೇಳಿದ್ದರು. ಆದರೆ, ಭದ್ರತೆ ಕಾರಣದಿಂದ ರಾಜ್ಯ ಸರ್ಕಾರ ಪರೇಡ್'ಗೆ ಅವಕಾಶ ನೀಡರಲಿಲ್ಲ. ಆದರೆ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಟಗಾರರಿಗೆ ಸನ್ಮಾನ ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಸಲುವಾಗಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂಗೆ ಬರಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಜೂನ್.4ರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಸಂಚರಿಸಿದ್ದಾರೆಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೈನ್ 1ರಲ್ಲಿ 4,78,334 ಪ್ರಯಾಣಿಕರು ಸಂಚಾರ ಮಾಡಿದ್ದರೆ, ಲೈನ್ 2ರಲ್ಲಿ 2,84,674, ಮೆಜೆಸ್ಟಿಕ್ ಇಂಟರ್ ಚೇಂಜ್ನಲ್ಲಿ 2,03,724 ಪ್ರಯಾಣಿಕರು ಸಂಚಾರ ಮಾಡಿದ್ದಾರೆಂದು ತಿಳಿದುಬಂದಿದೆ.
ನಮ್ಮ ಮೆಟ್ರೋದಲ್ಲಿ ಈ ಹಿಂದೆ ಏಪ್ರಿಲ್ 17 ರಂದು 9,08,153 ಪ್ರಯಾಣಿಕರು ಸಂಚರಿಸಿದ್ದರು. ಇದು ಇದೂವರೆಗಿನ ದಾಖಲೆಯಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಪ್ರಯಾಣ ದರ ಏರಿಕೆಯ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿತ್ತು.
ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಖುಷಿಯ ಸಂಭ್ರಮದ ನಡುವೆ ಬೆಂಗಳೂರಿಗರಿಗೆ ಶಾಕ್ ನೀಡುವ ಘಟನೆಯೊಂದು ನಡೆದುಹೋಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ವಿಜಯೋತ್ಸವವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸಾಗರೋಪಾದಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಅಭಿಮಾನಿಗಳು ಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕಾಲ್ತುಳಿತ ಶುರುವಾಗಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಆಘಾತವನ್ನು ತಂದೊಡ್ಡಿದ್ದು, ಸರ್ಕಾರದ ವೈಫಲ್ಯತೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ.