
ಬೆಂಗಳೂರು: ಆರ್'ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಿ ಕಾಲ್ತುಳಿತಕ್ಕೆ ಸಿಲುಕಿ ತಮ್ಮವರು ಮೃತಪಟ್ಟ ಸುದ್ದಿ ತಿಳಿದು ಮೃತರ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಬೌರಿಂಗ್, ವೈದೇಹಿ, ಮಣಿಪಾಲ್ ಆಸ್ಪತ್ರೆಗಳ ಬಳಿ ಜಮಾಯಿಸಿ ಕಣ್ಣೀರಿಟ್ಟರು. ತಮ್ಮ ಪ್ರೀತಿಪಾತ್ರರು ಶವವಾಗಿ ಮಲಗಿರುವುದನ್ನು ಕಂಡು ಮಮ್ಮಲ ಮರುಗಿದರು.
ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ, ಮೈಸೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ರಾಯಸಮದ್ರ ಗ್ರಾಮದ 32 ವರ್ಷದ ಪೂರ್ಣ ಚಂದ್ರ ಎಂಬುವವರೂ ಕೂಡ ಕಾಲ್ತುಳಿತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೂರ್ಣ ಚಂದ್ರ ಅವರು ಶಿಕ್ಷಕ ಆರ್.ಬಿ. ಚಂದ್ರು -ಕಾಂತಾಮಣಿ ದಂಪತಿಯ ಪುತ್ರ. ಇವರ ಚಿಕ್ಕಪ್ಪ ದೊರೆಶ ಪೂರ್ಣಚಂದ್ರ ಅವರಿಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ವೈದೇಹಿ ಆಸ್ಪತ್ರೆಯಲ್ಲಿ ಮೃತದೇಹ ಕಂಡು ಕಣ್ಣೀರಿಟ್ಟರು.
ಘಟನೆಯಲ್ಲಿ 14 ವರ್ಷದ ದಿವ್ಯಾಂಶಿ ಎಂಬ ಬಾಲಕಿ ಕೂಡ ಮೃತಪಟ್ಟಿದ್ದು, ಮಗಳ ಸಾವು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ವೇಳೆ ಮಗಳ ದೇಹ ಕತ್ತರಿಸದಂತೆ ಪರಿಪರಿಯಾಗಿ ವೈದ್ಯರ ಬಳಿ ವಿನಂತಿಸುತ್ತಿದ್ದದ್ದು, ಸ್ಥಳದಲ್ಲಿದ್ದವರು ಹೃದಯ ಕಿತ್ತು ಬರುವಂತೆ ಮಾಡುತ್ತಿತ್ತು.
ಡಾ. ಅಂಬೇಡ್ಕರ್ ವೈದ್ಯಕೀಯ ಮತ್ತು ದಂತ ಕಾಲೇಜಿನ ವಿದ್ಯಾರ್ಥಿನಿ 22 ವರ್ಷದ ಶ್ರವಣ್ ಕೆ.ಟಿ. ಎಂಬುವವರು ಸಾವನ್ನಪ್ಪಿದ್ದು, ಮಗನನ್ನು ವೈದ್ಯನಾಗಿ ನೋಡಬೇಕೆಂದು ಸಾಕಷ್ಟು ಕನಸುಗಳನ್ನಿಟ್ಟುಕೊಂಡಿದ್ದ ತಾಯಿಗೆ ಆತನ ಮೃತದೇಹ ಕಂಡು ಸಿಡಿಲು ಬಡಿದಂತಾಗಿ ಪ್ರಜ್ಞೆ ತಪ್ಪಿ ಬಿದ್ದ ಬೆಳವಣಿಗೆ ಕಂಡು ಬಂದಿತು.
ಒಟ್ಟಾರೆಯಾಗಿ. ಬೌರಿಂಗ್ ಆಸ್ಪತ್ರೆಯಲ್ಲಿ ಆರು ಸಾವುಗಳು ದಾಖಲಾಗಿದ್ದು, 18 ಗಾಯಾಳುಗಳಿಗೆ ಮೂಳೆ ಮುರಿತ, ತಲೆಗೆ ಗಾಯ ಮತ್ತು ಬೆನ್ನುಮೂಳೆ ಗಾಯ ಸೇರಿದಂತೆ ಇತರೆ ದೂರುಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಿಲ್ಲರ್ಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ (ಹಿಂದೆ ವಿಕ್ರಮ್ ಆಸ್ಪತ್ರೆ) 18 ವರ್ಷದ ವಿದ್ಯಾರ್ಥಿನಿ ಚಿನ್ಮಯಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.
ಘಟನೆ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಬೌರಿಂಗ್ ಆಸ್ಪತ್ರೆ ನಡುವಿನ 1 ಕಿ.ಮೀ. ರಸ್ತೆಯ ಉದ್ದಕ್ಕೂ ಆಂಬ್ಯುಲೆನ್ಸ್‌ಗಳ ಸೈರನ್‌ಗಳು ಮೊಳಗಿದ್ದು ಕಂಡು ಬಂದಿತು.
ಘಟನೆ ವೇಳೆ ಸ್ಥಳದಲ್ಲಿ ಸ್ವಯಂಸೇವಕರು ಇಧ್ದ ಕಾರಣ ಮತ್ತಷ್ಟು ಎದುರಾಗಬೇಕಿದ್ದ ಸಾವು-ನೋವುಗಳು ತಡೆಯಲು ಸಹಾಯಕವಾಯಿತು.
ಗಾಯಾಳುಗಳನ್ನು ಹಾಗೂ ಉಸಿರುಗಟ್ಟುತ್ತಿದ್ದ ಜನರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದರು.
ಉಸಿರುಗಟ್ಟಿ ಸಾವನ್ನಪ್ಪುತ್ತಿದ್ದ ಯುವತಿಯನ್ನು ಯುವಕನೋರ್ವ ತನ್ನ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಕಂಡು ಬಂದಿತು.
ಜನಸಂದಣಿ ವಿಪರೀತವಾಗುತ್ತಿದ್ದಾಗ, ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು, ಗಾಯಗೊಂಡಿದ್ದರೂ ಒತ್ತಡವನ್ನು ತಡೆದುಕೊಳ್ಳಲು ಪ್ರಯತ್ನಿಸಿದೆ ಎಂದು ಚಲನಚಿತ್ರ ಕಲಾವಿದ ಮಹೇಶ್ ಕೆ.ಆರ್ ಅವರು ಹೇಳಿದರು,
ಇನ್ನು ಘಟನೆ ವೇಳೆ ಸ್ಥಳದಲ್ಲಿ ಯಾವುದೇ ಆಂಬ್ಯುಲೆನ್ಸ್ ಇಲ್ಲದಿದ್ದಾಗ, ಹೊಯ್ಸಳ ಗಸ್ತು ವಾಹನಗಳು ಗಾಯಾಳುಗಳನ್ನು ಗಾಯಾಳುಗಳನ್ನು ಸ್ಥಳಾಂತರಿಸುವ ಕೆಲಸ ಮಾಡಿದ್ದು ಕಂಡು ಬಂದಿತು.
ನಮ್ಮ ಕರ್ನಾಟಕ ಸೇನೆಯ ನಾಯಕ ಸುರೇಶ್ ನಾಯಕ್ ಅವರು ಮಾತನಾಡಿ, ಪೊಲೀಸರೊಂದಿಗೆ ಗಾಯಾಳುಗಳನ್ನು ಗೇಟ್ ಸಂಖ್ಯೆ 8 ರಿಂದ 12 ಕ್ಕೆ ಸ್ಥಳಾಂತರಿಸಿದೆವು. ಅಲ್ಲಿಂದ ಆಂಬ್ಯುಲೆನ್ಸ್‌ಗಳು ಗಾಯಾಳುಗಳನ್ನು ಸ್ಥಳಾಂತರಿಸಿದವು ಎಂದು ತಿಳಿಸಿದ್ದಾರೆ.
Advertisement