
ಮಂಗಳೂರು: ಬಂಟ್ವಾಳ ತಾಲೂಕಿನ ಅಬ್ದುಲ್ ರಹಿಮಾನ್ ಹತ್ಯೆಗೈದ ಆರೋಪಿಗಳಿಂದ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳ ಮುಖಂಡರು ಅಂತರ ಕಾಯ್ದುಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್‌ಪಿ ಮುಖಂಡ ಮತ್ತು ಪ್ರಾಂತ ಗೋರಕ್ಷಾ ಪ್ರಮುಖ್ ಸುನೀಲ್ ಕೆ.ಆರ್, ವಿಎಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ಇಂತಹ ಘೋರ ಅಪರಾಧಗಳನ್ನು ಮಾಡುವುದಿಲ್ಲ .ಹಾಗೆ ಮಾಡಲು ಸಂಘಟನೆ ಯಾರನ್ನೂ ಪ್ರಚೋದಿಸುವುದಿಲ್ಲ ಎಂದು ಹೇಳಿದರು.
ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸುನೀಲ್, ಸುನೀಲ್ ಶೆಟ್ಟಿ ಈ ಹಿಂದೆ ತಪ್ಪು ಮಾಡಿದ್ದಾರೇನೂ, ಆದರೂ, ಅವರು ರಾಷ್ಟ್ರ ಮತ್ತು ಹಿಂದೂ ಧರ್ಮದ ಉದ್ದೇಶ ಈಡೇರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದೂ ಧರ್ಮ ಮತ್ತು ರಾಷ್ಟ್ರದ ವಿಚಾರದಲ್ಲಿ ಶ್ರಮಿಸುವವರು ಹಿಂದೂ ಕಾರ್ಯಕರ್ತರು ಎಂದರು.
ಇದಲ್ಲದೆ ಓರ್ವ ಕೊಲೆ ಆರೋಪಿಯ ತಂದೆಗೆ ರಹಿಮಾನ್ ರಕ್ತದಾನ ಮಾಡಿದ್ದಾರೆ ಎಂಬ ಸುದ್ದಿಯನ್ನು ಅವರು ನಿರಾಕರಿಸಿದರು. ಆತನ ತಂದೆಗೆ ವಿದ್ಯುತ್ ತಗುಲಿತ್ತು. ರಕ್ತದ ಅಗತ್ಯವಿರಲಿಲ್ಲ. ಕೊಲೆಯ ಹಿಂದಿನ ಉದ್ದೇಶವನ್ನು ಎಸ್ಪಿ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿಕೆಯನ್ನು ಟೀಕಿಸಿದ ಸುನೀಲ್, ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾದವರು ಕೂಡ ರೌಡಿಶೀಟರ್ ಪಟ್ಟಿಯಲ್ಲಿರುವುದರಿಂದ ಅವರನ್ನು ಕ್ರಿಮಿನಲ್ ಎಂದು ಕರೆಯಲು ಸಾಧ್ಯವಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ನೆಪದಲ್ಲಿ ಸ್ಥಳೀಯ ಪೊಲೀಸರು ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಯೊಂದಕ್ಕೂ ಒಂದು ಮಿತಿ ಇರುತ್ತದೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪೊಲೀಸರು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ 24 ಗೋ ರಕ್ಷಿಸಿದ್ದಕ್ಕಾಗಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.
Advertisement