
ಬೆಂಗಳೂರು: ಬುಧವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಲ್ಲಿ 11 ಜನ ಜನರು ಸಾವನ್ನಪ್ಪಿದ್ದರು. ಮೃತರ ಪೈಕಿ ಒಬ್ಬರಾದ 15 ವರ್ಷದ ಬಾಲಕಿ ದಿವ್ಯಂಶಿ ಪೋಷಕರು ಇದೀಗ ಗಂಭೀರ ಆರೋಪ ಮಾಡುತ್ತಿದ್ದಾರೆ. ಎಫ್‌ಐಆರ್ ದಾಖಲಿಸಲು ಸುಮಾರು ನಾಲ್ಕು ಗಂಟೆ ಪೊಲೀಸ್ ಠಾಣೆಯಲ್ಲೇ ಕಾದೆವು ಎಂದು ಹೇಳಿದರು.
ಯಲಹಂಕದಲ್ಲಿರುವ ಅವರ ಮನೆಗೆ ಬಾಲಕಿಯ ಮೃತದೇಹವನ್ನು ಕರೆದೊಯ್ಯುತ್ತಿದ್ದಂತೆಯೇ ಸಂಬಂಧಿಕರು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಗೇಟ್ ನಂಬರ್ 15ರಲ್ಲಿ ತಳ್ಳಾಟ ನಡೆದ ನಂತರ ತನ್ನ ಮಗಳು ಹೇಗೆ ಕೆಳಗೆ ಬಿದ್ದಳು ಎಂಬುದನ್ನು ಮೃತ ಬಾಲಕಿಯ ತಂದೆ ಶಿವಕುಮಾರ್ ವಿವರಿಸಿದರು.
ಆ ಸಂದರ್ಭದಲ್ಲಿ ದಿವ್ಯಾಂಶಿ ತಾಯಿ ಹಾಗೂ ಚಿಕ್ಕಮ್ಮ ಕೂಡಾ ಜೊತೆಯಲ್ಲಿದ್ದರು ಎಂದು ಅವರು ತಿಳಿಸಿದರು.
ಆಂಬ್ಯುಲೆನ್ಸ್ ವ್ಯವಸ್ಥೆ, ಪೊಲೀಸರ ಸಹಕಾರ ಇರಲಿಲ್ಲ:
ಕಾಲ್ತುಳಿತ ನಂತರ ಅಧಿಕಾರಿಗಳು ಬಂದರು. ಆದರೆ ಸರಿಯಾದ ಸಹಕಾರ ನೀಡಲಿಲ್ಲ. ಪ್ರಥಮ ಚಿಕಿತ್ಸೆ ಕೂಡಾ ಸರಿಯಾಗಿ ಮಾಡಲಿಲ್ಲ. ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ಪೊಲೀಸರ ನೆರವಿಲ್ಲದೆ ಅಂತಿಮವಾಗಿ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯಿದ್ದೇವು. ಆದರೆ, ಆಸ್ಪತ್ರೆಯಲ್ಲಿನ ಸಿಬ್ಬಂದಿ ನನ್ನ ಪುತ್ರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಎಫ್ ಐಆರ್ ದಾಖಲಿಸಲು ಪೊಲೀಸ್ ಠಾಣೆಯಲ್ಲೇ ನಾಲ್ಕು ಗಂಟೆಗಳ ಕಾಲ ಕಾದೆವು ಎಂದು ಅವರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಿವ್ಯಂಶಿ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಆಂಧ್ರ ಪ್ರದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದ ಅವರು, ಇದರ ಸಂಪೂರ್ಣ ಹೊಣೆಯನ್ನು ರಾಜ್ಯಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು.
ಆರ್ ಸಿಬಿ ಸಂಭ್ರಮಾಚರಣೆಗೆ ಯಾಕೆ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ? ರಾಜಕೀಯ ಸಭೆ, ಕಾರ್ಯಕ್ರಮಗಳಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಈ ಸಂಭ್ರಮಾಚರಣೆಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿರಲಿಲ್ಲ ಎಂದು ಕಣ್ಣೀರಿಟ್ಟರು.
ಈ ಮಧ್ಯೆ ಕಾಲ್ತುಳಿತದಲ್ಲಿ ಮೃತಪಟ್ಟ 28 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಕಾಮಚಿ ದೇವಿ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತಮಿಳುನಾಡಿನ ಮೈಲಾಡುಂಪರೈಗೆ ಗುರುವಾರ ರವಾನಿಸಲಾಯಿತು. ಅಲ್ಲಿ ಸಂಬಂಧಿಕರು, ಸ್ನೇಹಿತರು ಅಂತಿಮ ನಮನ ಸಲ್ಲಿಸಿದರು.
Advertisement