
ಬೆಂಗಳೂರು: ಐಪಿಎಲ್ 2025 ರಲ್ಲಿ RCB ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತಿರುವ ರೀತಿಗೆ ಸಂಸದ ತೇಜಸ್ವಿ ಸೂರ್ಯ (Tejasvi Surya) ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪೋಸ್ಟ್ ಅಪ್ಡೇಟ್ ಮಾಡಿರುವ ಸಂಸದರು. 18 ವರ್ಷಗಳ ಬಳಿಕ ತಮ್ಮ ಅದ್ಭುತ ಪ್ರದರ್ಶನದಿಂದ IPL ಕಪ್ ಗೆದ್ದಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಸಂಭ್ರಮಾಚರಣೆ ವೇಳೆ RCB ಆರ್‌ಸಿಬಿ ಆಡಳಿತ ಮಂಡಳಿಯು ಭದ್ರತಾ ಕ್ರಮಗಳ ಕಳಪೆ ವ್ಯವಸ್ಥೆ ಮಾಡಿತ್ತು ಎಂದು ಆರೋಪಿಸಿದ್ದಾರೆ.
"18 ವರ್ಷಗಳ ನಂತರ ನಮಗೆ ಐಪಿಎಲ್ ಗೆದ್ದುಕೊಟ್ಟಿದ್ದಕ್ಕಾಗಿ ನಾವು ಆರ್‌ಸಿಬಿ ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಋಣಿಯಾಗಿದ್ದೇವೆ. ಅವರು ಮೈದಾನದಲ್ಲಿ ಅದ್ಭುತ ಕ್ರಿಕೆಟ್ ಮತ್ತು ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಿದರು ಮತ್ತು ನಮ್ಮ ಕ್ಲಬ್‌ಗೆ ದೀರ್ಘಕಾಲದ ನಂತರ ಈ ವೈಭವವನ್ನು ತಂದುಕೊಟ್ಟಿದ್ದಾರೆ".
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬಗಳಿಗೆ ಟ್ರೋಫಿ ಗೆದ್ದುಕೊಟ್ಟಿದ್ದಕ್ಕಾಗಿ ಸನ್ಮಾನಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಇತರ ಆಟಗಾರರು ಮತ್ತು ಆರ್‌ಸಿಬಿ ಆಡಳಿತ ಮಂಡಳಿ ಭದ್ರತಾ ಕ್ರಮಗಳ ಕಳಪೆ ವ್ಯವಸ್ಥೆ ಮಾಡಿದ್ದಕ್ಕಾಗಿ ನಾವು ತುಂಬಾ ಅಸಮಾಧಾನಗೊಂಡಿದ್ದೇವೆ.
ಆರ್‌ಸಿಬಿ ಆಡಳಿತ ಮಂಡಳಿಯನ್ನು ಬಂಧಿಸಲಾಗಿದೆ ಮತ್ತು ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ ಎಂಬುದು ಒಳ್ಳೆಯ ಬೆಳವಣಿಗೆ. ಬೆಂಗಳೂರಿನಲ್ಲಿ ಭದ್ರತೆಗೆ ಅವರೇ ಪ್ರಾಥಮಿಕವಾಗಿ ಜವಾಬ್ದಾರರು.
ಇಷ್ಟೆಲ್ಲಾ ಆದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಈಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಿಂತಿರುಗಿ ತಮ್ಮ ಮುಂದಿನ ಐಪಿಎಲ್ ಗಾಗಿ ಅಭ್ಯಾಸವನ್ನು ಪ್ರಾರಂಭಿಸಬಹುದು" ಎಂದು ತೇಜಸ್ವಿ ಸೂರ್ಯ ಸರ್ಕಾರದ ಬಗ್ಗೆ ವ್ಯಂಗ್ಯ ಧಾಟಿಯಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.
Advertisement