ಬೆಂಗಳೂರು ದುರಂತ: ಅಧಿಕಾರಸ್ಥರ ಅಹಂ ಎದುರು ಅಸಹಾಯಕರಾದ ಪೊಲೀಸರು!! (ಸುದ್ದಿ ವಿಶ್ಲೇಷಣೆ)

ಈ ದುರಂತವನ್ನು ತಪ್ಪಿಸಬಹುದಿತ್ತು. ಆದರೆ ಅಧಿಕಾರದ ಮಂಪರು, ಜನಪ್ರಿಯತೆಯ ಹುಸಿ ನಿರೀಕ್ಷೆ, 11 ಮಂದಿಯ ಜೀವ ಬಲಿ ತೆಗೆದುಕೊಂಡಿತು.
CM Siddaramaiah- former Police commissioner Dayanand
ಸಿಎಂ ಸಿದ್ದರಾಮಯ್ಯ- ಮಾಜಿ ಪೊಲೀಸ್ ಆಯುಕ್ತ ದಯಾನಂದ್online desk
Updated on

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊನ್ನೆ ಆರ್.ಸಿ.ಬಿ ತಂಡದ ಆಟಗಾರರ ಸನ್ಮಾನ ಸಮಾರಂಭದ ಸಂದರ್ಭದಲ್ಲಿ ನಡೆದ ತಳ್ಳಾಟ, ನೂಕು ನುಗ್ಗಲಿಗೆ 11 ಮಂದಿ ಅಮಾಯಕರ ಪ್ರಾಣ ಹೋಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡುವ ಮೂಲಕ ತನ್ನದೇನೂ ತಪ್ಪಿಲ್ಲ ಎಂದು ತೋರಿಸಿಕೊಳ್ಳಲು ಹೊರಟಿದೆ. ಇದು ಆಡಳಿತ ಸೂತ್ರ ಹಿಡಿದ ನಾಯಕರ ಇನ್ನೊಂದು ಹುಂಬತನ.

ಇದರ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಗೋವಿಂದರಾಜು ಅವರನ್ನು ಪದಚ್ಯುತಿಗೊಳಿಸಲಾಗಿದೆ. ಪೊಲೀಸ್ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರನ್ನು ವರ್ಗ ಮಾಡಲಾಗಿದೆ. ಆರ್.ಸಿ.ಬಿ. ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಈ ಪೈಕಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಕೆಲವರು ಬಂಧನದಿಂದ ಪಾರಾಗಿದ್ದಾರೆ.

ಈ ದುರಂತದ ಆಳಕ್ಕಿಳಿದು ನೋಡಿದರೆ ಅಧಿಕಾರಸ್ಥರಿಗಿರುವ ಅಹಂ, ಹಣವಂತರ ಜತೆಗಿನ ಅತಿಯಾದ ಗೆಳೆತನ, ತಮ್ಮದೇ ಸರ್ಕಾರದ ಅಧಿಕಾರಿಗಳ ಕುರಿತಾದ ಅಸಡ್ಡೆ ಹೊಂದಿರುವುದು ಗೋಚರವಾಗುತ್ತದೆ. ಪ್ರಮುಖವಾಗಿ ಇಂಥದೊಂದು ಅದ್ಧೂರಿ ಸನ್ಮಾನದ ಅವಶ್ಯಕತೆ ಇತ್ತೆ? ಎಂಬ ಜನ ಸಾಮಾನ್ಯರ ಪ್ರಶ್ನೆಗೆ ಸರ್ಕಾರ ಈವರೆವಿಗೆ ಉತ್ತರಿಸಿಲ್ಲ.

ಐಪಿಎಲ್ ಟೂರ್ನಿ ಎಂದು ಕರೆಯಲ್ಪಡುವ ಈ ಕ್ರಿಕೆಟ್ ಪಂದ್ಯಾವಳಿ ಇನ್ನೊಂದು ಅರ್ಥದಲ್ಲಿ ದುಡ್ಡಿದ್ದವರ ಶೋಕಿ. ವಿವಿಧ ತಂಡಗಳಲ್ಲಿ ಆಡುವ ಆಟಗಾರರನ್ನು ಪ್ರಾಯೋಜಕ ಕಂಪನಿಗಳು ಕೋಟಿಗಟ್ಟಲೆ ಹಣ ಖರ್ಚುಮಾಡಿ ಹರಾಜಿನಲ್ಲಿ ಖರೀದಿಸುತ್ತವೆ. ಹೀಗೆ ಖರೀದಿಗೊಳಗಾದ ಆಟಗಾರರು ಆ ಕಂಪನಿಗಳ ಪ್ರತಿನಿಧಿಗಳಾಗಿ ಆಡುತ್ತಾರೆ, ಈ ಆಟಗಾರರಿಗೆ ದೇಶ –ಭಾಷೆಗಳ ಗಡಿ ಇಲ್ಲ. ಇದೇ ಆಟಗಾರರು ವಿವಿಧ ಉತ್ಪನ್ನಗಳ ಪ್ರಚಾರದ ಜಾಹೀರಾತಿಗೂ ಪ್ರತಿನಿಧಿಗಳಾಗುವುದರಿಂದ ಆ ಕಂಪನಿಗಳು ಲಾಭ ಮಾಡಿಕೊಳ್ಳುತ್ತವೆ. ಇಲ್ಲೂ ಜನ ಸಾಮಾನ್ಯರ ಜೇಬಿ ಕತ್ತರಿ ಬೀಳುತ್ತದೆ. ಇದಕ್ಕೆ ಈ ಬಾರಿಯ ಐಪಿಎಲ್ ನಲ್ಲಿ ಜಯಗಳಿಸಿದ ತಂಡದ ಪ್ರಾಯೋಜಕತ್ವ ವಹಿಸಿರುವ ರಾಯಲ್ ಚಾಲೆಂಜರ್ಸ್ ಸಂಸ್ಥೆಯೂ ಹೊರತಲ್ಲ.

ಐಪಿಎಲ್ ನ ಈ ಪಂದ್ಯ ನಡೆದಿದ್ದು ಮಂಗಳವಾರ ಗುಜರಾತ್ ನ ಅಹಮದಾಬಾದ್ ನ ಕ್ರೀಡಾಂಗಣದಲ್ಲಿ. ಅದೇ ದಿನ ಆರ್.ಸಿ.ಬಿ,ತಂಡ ಗೆಲ್ಲುತ್ತಿದ್ದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಿಯಾಗಿ ರಾಜ್ಯದ ವಿವಿಧ ನಾಯಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ಮಂಗಳವಾರ ಇಡೀ ದಿನ ಐಪಿಎಲ್ ಜ್ವರ ಇಡೀ ಬೆಂಗಳೂರನ್ನೂ ವ್ಯಾಪಿಸಿತ್ತು. ಗಲ್ಲಿ-ಗಲ್ಲಿಗಳಲ್ಲಿ ಜನ ಈ ಗೆಲುವನ್ನು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಇಡೀ ದಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಷ್ಟೇ ಅಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಿದರು.

ಆದರೆ ಅನಾಹುತಗಳಿಗೆ ಮುನ್ನುಡಿ ಆರಂಭವಾಗಿದ್ದೇ ನಂತರ. ಆರ್.ಸಿ.ಬಿ.ತಂಡ ಪಂದ್ಯದಲ್ಲಿ ಗೆದ್ದನಂತರ ಬೆಂಗಳೂರಲ್ಲಿ ಸರ್ಕಾರದ ವತಿಯಿಂದ ಸನ್ಮಾನ ಮಾಡುವ ಘೋಷಣೆ ಹೊರ ಬಿತ್ತು. ತಂಡದ ಗೆಲುವಿನಿಂದ ರೋಮಾಂಚನಗೊಂಡ ಆಡಳಿತ ಸೂತ್ರ ಹಿಡಿದ ನಾಯಕರು ಯಾವುದೇ ಪೂರ್ವಾಪರ ಪರಿಸ್ಥಿತಿಗಳ ವಿಚಾರ ಮಾಡದೇ ಕಾರ್ಯಕ್ರಮವನ್ನು ಘೋಷಿಸಿದ್ದೇ ಅವಾಂತರಗಳಿಗೆ ನಾಂದಿ ಆಯಿತು.

CM Siddaramaiah- former Police commissioner Dayanand
ಹೈಕಮಾಂಡ್ ತಂತ್ರ: ಇಕ್ಕಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)

ಕಾರ್ಯಕ್ರಮ ಆಯೋಜನೆಗೆ ಆರ್.ಸಿ.ಬಿ. ಹಾಗೂ ಕೆಎಸ್ ಸಿಎ ಉತ್ಸಾಹ ತೋರಿದರೆ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಅಂದಾಜು ಮಾಡಬೇಕಾಗಿದ್ದ ಸರ್ಕಾರ ಮೈಮರೆಯಿತು. ಕೆಲವೇ ಗಂಟೆಗಳ ಅಂತರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ನಿಯೋಜಿಸುವುದು ಕಷ್ಟದ ಕೆಲಸ. ಇದಲ್ಲದೇ ಲಕ್ಷಾಂತರ ಜನ ಅಭಿಮಾನಿಗಳು ಸೇರುವ ಸಾಧ್ಯತೆ ಇರುವುದರಿಂದ ಕೆಲವು ದಿನಗಳು ಕಳೆದ ನಂತರ ಈ ಕಾರ್ಯಕ್ರಮ ಆಯೋಜಿಸುವುದು ಉಚಿತ ಎಂಬ ಪೊಲೀಸ್ ಅಧಿಕಾರಿಗಳ ವರದಿಯನ್ನು ಆಡಳಿತದ ಚುಕ್ಕಾಣಿ ಹಿಡಿದವರು ನಿರ್ಲಕ್ಷಿಸಿದ್ದೇ ಕಾರಣ.

ಸ್ವತಃ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೂ ಈ ಕಾರ್ಯಕ್ರಮ ನಡೆಯುವುದು ಇಷ್ಟವಿರಲಿಲ್ಲ. ಕಾನೂನು ಸುವ್ಯವಸ್ಥೆಯಲ್ಲಿ ಕೊಂಚ ಲೋಪವಾದರೂ ಅದರಿಂದ ಸಮಸ್ಯೆಗಳು ಉದ್ಭವಿಸಬಹುದು ಎಂಬ ಮುಂದಾಲೋಚನೆ ಅವರಿಗಿತ್ತಾದರೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರನ್ನು ಬಲವಂತವಾಗಿ ಒಪ್ಪಿಸಲಾಯಿತು. ಅವರ ಅಭಿಪ್ರಾಯಕ್ಕೆ ಮಾನ್ಯತೆ ಸಿಗಲಿಲ್ಲ ಎಂಬುದು ಉನ್ನತ ಮೂಲಗಳು ನೀಡುವ ಮಾಹಿತಿ. ಇದಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ವರದಿಗಾರರೊಬ್ಬರು ಈ ಕಾರ್ಯಕ್ರಮ ನಡೆಯುವುದು ಬೇಡ ಎಂದು ಪೊಲೀಸ್ ಗುಪ್ತಚರ ಇಲಾಖೆ ನೀಡಿರುವ ವರದಿ ಬಗ್ಗೆ ಮುಖ್ಯಮಂತ್ರಿಗಳನ್ನೇ ಪ್ರಶ್ನಿಸಿದಾಗಲೂ ಅವರು ಸಮರ್ಪಕ ಉತ್ತರ ನೀಡದೇ ಪ್ರಶ್ನೆ ಕೇಳಿದ ವರದಿಗಾರನ ಬಾಯಿ ಮುಚ್ಚಿಸಿದರು.

ವಿಧಾನಸೌಧದ ಎದುರು ಕಾರ್ಯಕ್ರಮ ನಡೆಸುವುದು ಉಚಿತವಲ್ಲ ಎಂಬ ಪೊಲೀಸ್ ಇಲಾಖೆಯ ಸಲಹೆಯನ್ನೂ ಸರ್ಕಾರ ನಿರ್ಲಕ್ಷಿಸಿತು. ಹೀಗಾಗಿ ಎರಡೂ ಕಡೆಗಳಲ್ಲಿ ಜನಸಂದಣಿ ನಿಯಂತ್ರಿಸುವುದು ಪೊಲೀಸರಿಗೆ ಅತ್ಯಂತ ಕಷ್ಟವಾಯಿತು. ತಂಡದ ಸ್ವಾಗತಕ್ಕೆ ಸ್ವಯಂ ಉಪ ಮುಖ್ಯಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ತೆರಳಿ ಫೋಟೋಗಳಿಗೆ ಫೋಸು ಕೊಟ್ಟರು. ವಿಧಾನಸೌಧದ ಬಳಿ ನಡೆದ ಕಾರ್ಯಕ್ರಮದಲ್ಲೂ ರಾಜಕೀಯ ನಾಯಕರ ಕುಟುಂಬದ ಸದಸ್ಯರು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲರೇ ಮುಜುಗುರ ಪಡುವಂತಾಯಿತು.

ಹೀಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಸರ್ಕಾರ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಅದಕ್ಕೆ ಗುರಿಯಾಗಿಸುವ ಮೂಲಕ ಅಮಾನತ್ತಿನ ಶಿಕ್ಷೆ ವಿಧಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನೂಕು ನುಗ್ಗಾಟದಲ್ಲಿ ಗಾಯಗೊಂಡ ಜನ ಸಾಮಾನ್ಯರನ್ನು ಪೊಲೀಸರೇ ಎತ್ತಿಕೊಂಡು ಓಡಿ ಆಶ್ಪತ್ರೆಗೆ ಸಾಗಿಸುವ ದೃಶ್ಯಗಳೂ ದಾಖಲಾಗಿವೆ. ಇಷ್ಟೆಲ್ಲ ಆದರೂ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿರುವ ನಿರ್ಧಾರದ ಹಿಂದೆ ಅನೇಕ ನಿಗೂಢ ಸಂಗತಿಗಳು ಅಡಗಿವೆ.

ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ಅತ್ಯಂತ ನಿಸ್ಪೃಹ ಅಧಿಕಾರಿ. ಅವರು ಕಮಿಷನರ್ ಆದ ನಂತರ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಕೈಗೊಂಡ ಕೆಲವು ನಿಷ್ಠುರ ಕ್ರಮಗಳು ರಾಜಕಾರಣಿಗಳ ನಿದ್ದೆ ಕೆಡಿಸಿತ್ತು ಎಂದೂ ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ. ರಾಜಕೀಯ ಪ್ರಭಾವಗಳಿಗೆ ಮಣಿಯುವವರು ಅವರಾಗಿರಲಿಲ್ಲ. ಸದ್ಯದಲ್ಲೇ ಡಿಜಿಪಿ ಹುದ್ದೆಗೆ ಮುಂಬಡ್ತಿ ಪಟ್ಟಿಯಲ್ಲಿದ್ದ ಅವರನ್ನು ಗುರಿಯಾಗಿಸಿ ಅಮಾನತು ಮಾಡಿರುವುದರ ಹಿಂದೆ ಅನೇಕ ನಿಗೂಢ ಕಾರಣಗಳು ಇವೆ ಎಂದೂ ಹೇಳಲಾಗುತ್ತಿದೆ.

ಪೊಲೀಸ್ ಗುಪ್ತಚರ ಇಲಾಖೆ ನೇರವಾಗಿ ಮುಖ್ಯಮಂತ್ರಿಗಳ ಅಧೀನದಲ್ಲೇ ಬರುತ್ತದೆ, ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳೂ ಸೇರಿದಂತೆ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ಪ್ರತಿ ನಿತ್ಯ ಮುಖ್ಯಮಂತ್ರಿಗೆ ನೇರವಾಗಿ ವರದಿ ರೂಪದಲ್ಲಿ ಹೋಗುತ್ತದೆ. ಇದಲ್ಲದೇ ಗುಪ್ತದಳದ ಮುಖ್ಯಸ್ಥರೇ ದಿನಕ್ಕೊಮ್ಮೆ ಮುಖ್ಯಮಂತ್ರಿಗಳನ್ನು ವೈಯಕ್ತಿವಾಗಿ ಭೇಟಿ ಮಾಡಿ ರಾಜ್ಯದಲ್ಲಿನ ಪ್ರಮುಖ ವಿದ್ಯಮಾನಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತಾರೆ. ಇದು ಯಾರೇ ಮುಖ್ಯಮಂತ್ರಿಯಾದರೂ ಪೊಲೀಸ್ ಇಲಾಖೆ ನಡೆಸಿಕೊಂಡು ಬಂದಿರುವ ಕ್ರಮ. ಸಾಮಾನ್ಯವಾಗಿ ಪೊಲಿಸ್ ಗುಪ್ತದಳದ ಮುಖ್ಯಸ್ಥರ ಹುದ್ದೆಗೆ ಮುಖ್ಯಮಂತ್ರಿಗೆ ನಂಬಿಕಸ್ಥರಾದ ಹಿರಿಯು ಐಪಿಎಸ್ ಅಧಿಕಾರಿಗಳನ್ನೇ ನೇಮಕ ಮಾಡಲಾಗುತ್ತದೆ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಪೊಲೀಸರು ಇಡೀ ಘಟನೆಯಲ್ಲಿ ತಮ್ಮ ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿರುವುದು ಕಂಡುಬರುತ್ತದೆ.

CM Siddaramaiah- former Police commissioner Dayanand
'ರಾಜಕೀಯ ಮಾಡುವುದಿಲ್ಲ, ಕ್ರಮ ಕೈಗೊಂಡಿದ್ದೇನೆ': ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ಸಮರ್ಥನೆ

ವಿಶೇಷ ಎಂದರೆ ಈ ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಪ್ರಕರಣ ದಾಖಲಿಸಿ ನಂತರ ಸರ್ಕಾರ ಎಚ್ಚೆತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ನಿವೃತ್ತ ನ್ಯಾಯಮೂರ್ತಿಯವರ ಆಧ್ಯಕ್ಷತೆಯಲ್ಲಿ ವಿಚಾರ ಆಯೋಗ ರಚಿಸಿರುವುದಲ್ಲದೇ ಪ್ರಕರಣದ ತನಿಖೆಯನ್ನು ಸಿಐಡಿಗೂ ಒಪ್ಪಿಸಲಾಗಿದೆ. ಮತ್ತೊಂದು ಕಡೆ ಮ್ಯಾಜಿಸ್ಟೇರಿಯಲ್ ತನಿಖೆಯೂ ಆರಂಭವಾಗಿದೆ. ಹೀಗಾಗಿ ಯಾವ ತನಿಖೆಯ ವ್ಯಾಪ್ತಿ ಏನು? ಸ್ವರೂಪ ಏನು? ಎಂಬುದರ ಬಗ್ಗೆಯೇ ಗೊಂದಲಗಳಿವೆ.

ಇದೀಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ವಿವರಣೆ ಕೇಳಿದೆ. ಕೆಪಿಸಿಸಿ ಈ ಕುರಿತು ವರಿಷ್ಠ ಮಂಡಳಿಗೆ ವರದಿಯೊಂದನ್ನು ರವಾನಿಸುವ ಸಾಧ್ಯತೆಗಳಿವೆ. ವರ ನಟ ಡಾ. ರಾಜ್ ಕುಮಾರ್ ರವರು ನಿಧನರಾದ ಸಂದರ್ಭದಲ್ಲೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಇಂತದೇ ಪ್ರಸಂಗ ಸಂಭವಿಸಿತ್ತು. ಅಂದಿನ ಸರ್ಕಾರಕ್ಕೆ ಅದೊಂದು ಕಪ್ಪು ಚುಕ್ಕೆಯಾಗೇ ಪರಿಣಮಿಸಿತ್ತು. ಆಗಲೂ ಸಂಭವಿಸಿದ ನೂಕು ನುಗ್ಗಾಟ ಪ್ರಕರಣದಲ್ಲಿ ರಾಜಕೀಯ ಕೈವಾಡದ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ರಾಜ್ಯ ಸರ್ಕಾರ ಇತಿಹಾಸದ ಘಟನೆಗಳಿಂದ ಪಾಠ ಕಲಿಯಬೇಕಿತ್ತು. ಆದರೆ ಹಾಗಾಗಲಿಲ್ಲ. ಇಷ್ಟಕ್ಕೂ ಆರ್.ಸಿ.ಬಿ. ತಂಡದಲ್ಲಿ ಕರ್ನಾಟಕದ ಕ್ರಿಕೆಟ್ ಆಟಗಾರರು ಯಾರೂ ಇಲ್ಲ. ಹಾಗಿದ್ದೂ ಈ ಸನ್ಮಾನ, ಆರ್ಭಟಗಳು ಬೇಕಿತ್ತೆ? ಎಂಬ ಪ್ರಶ್ನೆಗೆ ತಂಡದ ಫ್ರಾಂಚೈಸಿ ಹೊಂದಿರುವ ಕಂಪನಿಯತ್ತ ದೃಷ್ಟಿ ಹೊರಳುತ್ತದೆ.

ಗೃಹ ಸಚಿವ ಡಾ. ಪರಮೇಶ್ವರ್ ಅನುಭವಿ ನಾಯಕ. ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಹಲವು ಖಾತೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ಹೆಸರು ಗಳಿಸಿದವರು. ಗೃಹ ಸಚಿವರಾದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಗೆ ಪರೋಕ್ಷವಾಗಿ ಅವರನ್ನು ಹೊಣೆ ಮಾಡು ಪ್ರಯತ್ನಗಳು ನಡೆಯುತ್ತಿವೆ. ಗೃಹ ಸಚಿವರಾಗಿ ಅವರು ಅನೇಕ ಅಸಹಾಯಕ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಹಾಗಿದ್ದರೆ ಈ ಸರ್ಕಾರದಲ್ಲಿ `ಸೂಪರ್ ಪವರ್ ಗೃಹ ಸಚಿವರು’ ಬೇರೆ ಯಾರಾದರೂ ಇದ್ದಾರಾ? ಎಂಬ ಪ್ರಶ್ನೆಯೂ ತಲೆ ಎತ್ತಿದೆ.

100%

-ಯಗಟಿ ಮೋಹನ್

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com