
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಮಾರ್ಕೆಟಿಂಗ್ ಮತ್ತು ಆದಾಯ ವಿಭಾಗದ ಮುಖ್ಯಸ್ಥರಾಗಿರುವ ನಿಖಿಲ್ ಸೋಸಲೆ ಅವರನ್ನು ಶುಕ್ರವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಿಖಿಲ್ ಸೋಸಲೆ ಅವರು RCBಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ನಿಕಟ ವೈಯಕ್ತಿಕ ಬಾಂಧವ್ಯ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ವರ್ಷಗಳಿಂದ RCBಯ ಮಾರ್ಕೆಟಿಂಗ್ ಮತ್ತು ಆದಾಯ ವಿಭಾಗದ ಮುಖ್ಯಸ್ಥರಾಗಿ ನಿಖಿಲ್ ಸೋಸಲೆ ಅವರು ಕೆಲಸ ಮಾಡುತ್ತಿದ್ದಾರೆ. RCB ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾತೃ ಕಂಪನಿಯಾದ ಡಯಾಜಿಯೊ ಇಂಡಿಯಾದ ಉದ್ಯೋಗಿ ಈ ನಿಖಿಲ್ ಸೋಸಲೆ.
ಆರ್ ಸಿಬಿ ತಂಡದ ಪ್ರಮುಖ ನಿರ್ವಹಣೆ ಮತ್ತು ಸಾರ್ವಜನಿಕ ಮುಖವಾಗಿರವ ಸೋಸಲೆ ಪ್ರಾಂಚೈಸಿಯ ಬ್ರ್ಯಾಂಡ್ ಅನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಸಲೆ ಅವರನ್ನು ಬಂಧಿಸಿದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೈ ಪ್ರೊಫೈಲ್ ದಂಪತಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಸಂಪರ್ಕವನ್ನು ಹೈಲೈಟ್ ಮಾಡಿದರು. ಸೋಸಲೆ ಮತ್ತು ಅವರ ಪತ್ನಿ ಮಾಳವಿಕಾ ನಾಯಕ್ ಅವರು ಕೊಹ್ಲಿ ಮತ್ತು ಅನುಷ್ಕಾ ಅವರೊಂದಿಗೆ ಆರ್ ಸಿಬಿ ಕಾರ್ಯಕ್ರಮಗಳು ಮತ್ತು ಖಾಸಗಿ ಕೂಟಗಳಲ್ಲಿ ಭಾಗವಹಿಸಿದ ಫೋಟೋಗಳನ್ನು ಹಂಚಿಕೊಂಡರು.
ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಸೋಸಲೆ ಅವರ ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ವೇಳೆ ಆರ್‌ಸಿಬಿಯ ಪಂದ್ಯಗಳಲ್ಲಿ ಸೋಸಲೆ ಅವರ ಪತ್ನಿ ಮಾಳವಿಕಾ ಆಗಾಗ್ಗೆ ಅನುಷ್ಕಾ ಶರ್ಮಾ ಅವರೊಂದಿಗೆ ಕುಳಿತಿರುವುದು ಕಂಡುಬಂದಿದೆ. ಕೊಹ್ಲಿಯ ಹೊರತಾಗಿ, ಸೋಸಲೆ ಇತರ ಆರ್‌ಸಿಬಿ ಆಟಗಾರರಾದ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೂ ಹೆಚ್ಚಾಗಿ ಕಾಣಿಸಿಕೊಂಡಿದ್ದರು.
ಸೋಸಲೆ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಸೋಸಲೆ ಆಸ್ಟ್ರೇಲಿಯಾದ ಜೇಮ್ಸ್ ಕುಕ್ ವಿಶ್ವವಿದ್ಯಾಲಯದಿಂದ ಬ್ಯುಸಿನೆಸ್ ನಲ್ಲಿ ಡಬಲ್ ಪದವಿ ಪಡೆದಿದ್ದಾರೆ ಮತ್ತು ಆರ್‌ಸಿಬಿಯ ವ್ಯವಹಾರ ಮತ್ತು ಮಾರ್ಕೆಟಿಂಗ್ ತಂತ್ರವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
Advertisement