RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ; ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನಾಕಾರರು ಸರ್ಕಾರದ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದರು.
ವಿಧಾನಸೌಧದ ಮುಂದೆ ಬಿಜೆಪಿ ನಾಯಕರ ಪ್ರತಿಭಟನೆ
ವಿಧಾನಸೌಧದ ಮುಂದೆ ಬಿಜೆಪಿ ನಾಯಕರ ಪ್ರತಿಭಟನೆ
Updated on

ಬೆಂಗಳೂರು: RCB ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಬಿಜೆಪಿ ಶಾಸಕರು ಮತ್ತು ಸಂಸದರು ಭಾನುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ನಡೆದ ಪ್ರತಿಭಟನೆಯ ನೇತೃತ್ವವನ್ನು ವಿಧಾನಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ವಹಿಸಿದ್ದರು.

ಈ ದುರಂತಕ್ಕೆ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನಾಕಾರರು ಸರ್ಕಾರದ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ 'ಕೊಲೆಗಡುಕರು' ಎಂದು ಘೋಷಣೆಗಳನ್ನು ಕೂಗಲಾಯಿತು.

ಘಟನೆಯಲ್ಲಿ ಮಧ್ಯ ಪ್ರವೇಶಿಸಬೇಕು ಮತ್ತು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ನಾಯಕರು ಶೀಘ್ರದಲ್ಲೇ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ಯೋಜಿಸುತ್ತಿದ್ದಾರೆ.

ಜೂನ್ 4ರಂದು ಸಂಜೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಕಾಲ್ತುಳಿತ ಸಂಭವಿಸಿತು. ಅಲ್ಲಿ ಆರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಘಟನೆಯಲ್ಲಿ ಹನ್ನೊಂದು ಜನರು ಸಾವಿಗೀಡಾದರು ಮತ್ತು 56 ಜನರು ಗಾಯಗೊಂಡರು.

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅಶೋಕ, ಉದ್ಯಮಿ ವಿಜಯ್ ಮಲ್ಯ ಈ ಹಿಂದೆ ಆರ್‌ಸಿಬಿ ತಂಡವನ್ನು ಪ್ರಾರಂಭಿಸಿದ್ದರು, ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆದರೆ, ಸಿಎಂ ಮತ್ತು ಉಪಮುಖ್ಯಮಂತ್ರಿ ಹೊಸ ಆರ್‌ಸಿಬಿ - Real Culprits of Bengaluru ಆಗಿದ್ದಾರೆ' ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ ಅಶೋಕ, ಬಿಜೆಪಿ ಪೊಲೀಸರೊಂದಿಗೆ ನಿಂತಿದೆ ಮತ್ತು ಪೊಲೀಸರ ಯಾವುದೇ ತಪ್ಪಿಲ್ಲದ ಕಾರಣ ಅವರ ಪರವಾಗಿ ಹೋರಾಡುತ್ತದೆ ಎಂದು ಹೇಳಿದರು.

ಪೊಲೀಸರು ಅನುಮತಿ ನಿರಾಕರಿಸಿದ್ದರೂ ವಿಜಯೋತ್ಸವ ಆಚರಿಸಲಾಗಿದೆ. ಹನ್ನೊಂದು ಜೀವಗಳ ನಷ್ಟವು 'ಸರ್ಕಾರಿ ಪ್ರಾಯೋಜಿತ ಕೊಲೆ'ಯಾಗಿದೆ ಹೊರತು ಬೇರೇನು ಅಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಅಧಿಕಾರದಲ್ಲಿರುವವರು ಹನ್ನೊಂದು ಜನರ ಮೃತದೇಹಗಳ ಮೇಲೆ ರಾಜ್ಯವನ್ನು ಆಳಲು ಸಾಧ್ಯವಿಲ್ಲ. ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ, ನೀವು ಅದನ್ನು ಕಳೆದುಕೊಂಡಿದ್ದೀರಿ. ಕಾನೂನಿನ ದೃಷ್ಟಿಯಲ್ಲಿ ನಿಮ್ಮ ಮೇಲೆ ಆರೋಪವಿದೆ ಎಂದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಆರ್‌ಸಿಬಿಯ 'ಬ್ರಾಂಡ್ ಅಂಬಾಸಿಡರ್‌ಗಳಂತೆ' ವರ್ತಿಸಿದರು. ಸಾವುನೋವುಗಳ ಹೊರತಾಗಿಯೂ ವಿಜಯೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದು ದೂರಿದರು.

ವಿಧಾನಸೌಧದ ಮುಂದೆ ಬಿಜೆಪಿ ನಾಯಕರ ಪ್ರತಿಭಟನೆ
ಬೆಂಗಳೂರು ಕಾಲ್ತುಳಿತ; RCB ಆಟಗಾರರ ಸನ್ಮಾನ ಕಾರ್ಯಕ್ರಮ ವಿರೋಧಿಸಿದ್ದ ವಿಧಾನಸೌಧದ ಭದ್ರತಾ ಮುಖ್ಯಸ್ಥರ ಪತ್ರ ವೈರಲ್!

'ಮೊದಲ ಸಾವು (ಜೂನ್ 4 ರಂದು ಮಧ್ಯಾಹ್ನ 3.15 ಕ್ಕೆ) ಸಂಭವಿಸಿತು. ವಿಜಯೋತ್ಸವ ಕಾರ್ಯಕ್ರಮವು ಸಂಜೆ 4.30-5ಕ್ಕೆ ಪ್ರಾರಂಭವಾಯಿತು. ಅಷ್ಟೊತ್ತಿಗಾಗಲೇ ಏಳರಿಂದ ಎಂಟು ಸಾವುಗಳು ಸಂಭವಿಸಿದ್ದವು. ನಂತರ ಉಪ ಮುಖ್ಯಮಂತ್ರಿ ಮತ್ತೊಂದು ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾಂಗಣಕ್ಕೆ ಹೋದರು. ಅಲ್ಲಿ ಸಂಜೆ 6.30-7ರ ಸುಮಾರಿಗೆ 1 ಕೋಟಿ ರೂ. ಮೌಲ್ಯದ ಪಟಾಕಿಗಳನ್ನು ಸಿಡಿಸಲಾಯಿತು. 11 ಸಾವುಗಳ ನಂತರ ಪಟಾಕಿಗಳನ್ನು ಸಿಡಿಸಲಾಯಿತು, ನಿಮಗೆ ಮಾನವೀಯತೆ ಇದೆಯೇ?' ಎಂದು ಕೇಳಿದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಸಾವಿನ ಬಗ್ಗೆ ಮಾಹಿತಿ ನೀಡಲು ವಿಫಲವಾದ ಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದಿರುವ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅಶೋಕ, ಸುದ್ದಿ ವಾಹಿನಿಗಳು ಘಟನೆ ಮತ್ತು ಸಾವುಗಳ ಕುರಿತು ಲೈವ್ ಅಪ್ಡೇಟ್ಸ್‌ಗಳನ್ನು ನೀಡುತ್ತಿದ್ದವು, ಮಾಹಿತಿ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿತ್ತು. ನಿಮ್ಮ ಪಿಎಗಳು ಅಥವಾ ಕಾರ್ಯದರ್ಶಿಗಳು ಅಥವಾ ಅಧಿಕಾರಿಗಳು ಏನು ಮಾಡುತ್ತಿದ್ದರು?. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಅಧಿಕಾರಿಗಳು ಸೇರಿದಂತೆ ಇಡೀ ಸರ್ಕಾರವೇ ತೊಲಗಬೇಕು ಎಂದು ಹೇಳಿದರು.

ಈ ಸಾವುಗಳು ಈ ಸರ್ಕಾರದ ಆರನೇ ಖಾತರಿಯಾಗಿದೆ. ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಾವು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com