
ಬೆಂಗಳೂರು: ಇತ್ತೀಚಿಗೆ ಪ್ರಯಾಣಿಕರ ದರವನ್ನು ಹೆಚ್ಚಳ ಮಾಡುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈಗ ಪ್ರಯಾಣ ದರ ಬಿಟ್ಟು ಬೇರೆ ಮಾರ್ಗದಿಂದ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಈಗ ಹೊಸ ಹೆಜ್ಜೆ ಇಟ್ಟಿದೆ.
ಆಯ್ದ ರೈಲುಗಳ ಹೊರಗಿನ ಭಾಗವನ್ನು ಜಾಹೀರಾತು ಪ್ರದರ್ಶನದಿಂದ ತುಂಬಿಸಲು ಆರಂಭಿಸಿದೆ. ಇತ್ತೀಚೆಗೆ ಹಲವಾರು ರೈಲುಗಳು ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.
ಈ ಸಂಬಂಧ ಎರಡು ಖಾಸಗಿ ಸಂಸ್ಥೆಗಳೊಂದಿಗೆ BMRCL ದೀರ್ಘಾವಧಿಯ ಜಾಹೀರಾತು ಒಪ್ಪಂದಗಳಿಗೆ ಏಪ್ರಿಲ್‌ನಲ್ಲಿ ಸಹಿ ಹಾಕಿದೆ. ಮುದ್ರಾ ವೆಂಚರ್ಸ್ ನೇರಳೆ ಮಾರ್ಗದಲ್ಲಿ (Purple Line) ಚಲಿಸುವ ರೈಲುಗಳ ಬಗ್ಗೆ ಜಾಹೀರಾತು ನೀಡಲು ಏಳು ವರ್ಷಗಳ ಒಪ್ಪಂದ ಪಡೆದುಕೊಂಡಿದೆ.
ಲೋಕೇಶ್ ಔಟ್ ಡೋರ್ ಜಾಹೀರಾತು ಕಂಪನಿ, ಹಸಿರು ಮಾರ್ಗದಲ್ಲಿ (Green line) ರೈಲುಗಳಿಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ.
ಪ್ರಯಾಣಿಕರ ದರ ಹೊರತಾಗಿ ಆದಾಯ ಹೆಚ್ಚಿಸುವ ವಿಸ್ತೃತ ಯೋಜನೆಯ ಭಾಗವಾಗಿ BMRCL ಮೆಟ್ರೋ ರೈಲುಗಳಲ್ಲಿ ಜಾಹೀರಾತುಗಳ ಮೂಲಕ ವಾರ್ಷಿಕವಾಗಿ ರೂ. 25 ಕೋಟಿ ಗಳಿಸುವ ಗುರಿ ಹೊಂದಿದೆ.ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ, ಮತ್ತೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಅಮೇಯ್ ಕುಲಕರ್ಣಿ, ಪ್ರಯಾಣಿಕರ ದರ ಹೆಚ್ಚಿಸುವುದಕ್ಕಿಂತಲೂ ಬೇರೆ ಮಾರ್ಗಗಳಿವೆ ಎಂಬುದು ಕಡೆಗೂ ನಮ್ಮ ಮೆಟ್ರೋಗೆ ಅರಿವಾಗಿದೆ. ಭಾರತೀಯ ರೈಲ್ವೆಯೂ ದಶಕಗಳಿಂದಲೂ ಇದೇ ರೀತಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರ ಎಸ್. ತೇಜಸ್ ರೆಡ್ಡಿ, BMRCL ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿಟಕಿಯಾದರೂ ಕಾಣಲಿ ಎಂದು ಬರೆದುಕೊಂಡಿದ್ದಾರೆ.
Advertisement