
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ಇ.ಡಿ) 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ 92 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
'ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಅಧಿಕಾರಿಗಳಿಗೆ ಸೇರಿದ ₹300 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈವರೆಗೂ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಮೌಲ್ಯ ಸುಮಾರು 400 ಕೋಟಿ ರೂಪಾಯಿ' ಎಂದು ED ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗೆ ಹತ್ತಿರದ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಇ.ಡಿ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆಯನ್ನು ಪ್ರಾರಂಭಿಸಿದೆ ಎಂದು ಇಡಿ ತಿಳಿಸಿದೆ.
ಮುಡಾ ನಿವೇಶನಗಳ ಹಂಚಿಕೆಯಲ್ಲಿ ವಿವಿಧ ಕಾನೂನುಗಳು ಮತ್ತು ಸರ್ಕಾರಿ ಆದೇಶಗಳು/ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದೊಡ್ಡ ಪ್ರಮಾಣದ ಹಗರಣ ನಡೆದಿರುವುದು ಇಡಿ ತನಿಖೆಯಿಂದ ಬಹಿರಂಗವಾಗಿದೆ. ಜಿಟಿ ದಿನೇಶ್ ಕುಮಾರ್ ಸೇರಿದಂತೆ ಮುಡಾದ ಮಾಜಿ ಆಯುಕ್ತರು ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತನಿಖೆಯ ಸಮಯದಲ್ಲಿ ನಗದು, ಬ್ಯಾಂಕ್ ವರ್ಗಾವಣೆ, ಚರ/ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮ ಹಂಚಿಕೆ ಮಾಡಲು ಲಂಚ ಪಡೆದಿರುವ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಇಡಿ ಹೇಳಿದೆ.
Advertisement