
ಚಿತ್ರದುರ್ಗ: ನನ್ನನ್ನು ಬಿಟ್ಟುಬಿಡಿ, ನಿಮ್ಮ ಕಾಲಿಗೆ ಬೀಳುತ್ತೇನೆ. ನನಗೆ ಮದುವೆ ಬೇಡ ಎಂದು ಪುಟ್ಟ ಬಾಲಕಿಯೊಬ್ಬಳು ಅಂಗಲಾಚಿದರೂ ಬಿಡದೆ ಕುಟುಂಬವೊಂದು ಬಾಲ್ಯವಿವಾಹಕ್ಕೆ ಮುಂದಾಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೂನ್ 4 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪ ಟೀಕೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಅಪ್ರಾಪ್ತ ಬಾಲಕಿ ‘ನನ್ನನ್ನು ಬಿಟ್ಟು ಬಿಡಿ, ನಿಮ್ಮ ಕಾಲಿಗೆ ಬೀಳುತ್ತೇನೆ. ನನಗೆ ಈ ಮದುವೆ ಬೇಡ. ನನಗೆ ದೇವರೇ ಗತಿ, ಕಾಪಾಡು ದೇವರೇ, ಎಲ್ಲಿದ್ದೀಯಪ್ಪಾ ದೇವ್ರೆ” ಎಂದು ಅಂಗಲಾಚುತ್ತಿದ್ದರೂ . ಮದುವೆ ಮಾಡಬೇಕೆಂದು ಪಟ್ಟು ಹಿಡಿದಿರುವ ಪೋಷಕರು, ಬಾಲಕಿಯನ್ನು ಹೊಡೆದು ಬಡಿದು ಎಳೆದಾಡುತ್ತಿರುವುದು ಘಟನೆ ಮನಕಲಕುವಂತಿದೆ.
ಘಟನೆ ವೇಳೆ ಗ್ರಾಮಸ್ಥರು ಮಧ್ಯಪ್ರವೇಶಿಸಿದ್ದರೂ, ಕುಟುಂಬದವರು ತಡೆದು ವಿವಾಹಕ್ಕೆ ಯತ್ನಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಏತನ್ಮಧ್ಯೆ ಮದುವೆಯಾಗದಿರಲು ಗಟ್ಟಿ ನಿರ್ಧಾರದಲ್ಲಿದ್ದ ಬಾಲಕಿ ಕೊನೆಗೂ ಮನೆಯಿಂದ ಓಡಿ ಹೋಗುವ ಮೂಲಕ ವಿವಾಹದಿಂದ ತಪ್ಪಿಸಿಕೊಂಡಿದ್ದಾಳೆಂದು ತಿಳಿದುಬಂದಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಳ್ಳಕೆರೆಯ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಿ ಸವಿತಾ ಅವರು ಈ ವಿಷಯದ ಬಗ್ಗೆ ಮಾತನಾಡಿ, ನಾವು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದೇವೆ. ಆಕೆ ಈಗ ಬಾಲ ಮಂದಿರದಲ್ಲಿದ್ದಾಳೆ. ಮಕ್ಕಳ ಕಲ್ಯಾಣ ಸಮಿತಿ ಹುಡುಗಿಯೊಂದಿಗೆ ಮಾತನಾಡುತ್ತದೆ. ಸಲಹೆಗಾರರು ಆಕೆಗೆ ಸಮಾಧಾನ ಹೇಳುತ್ತಾರೆ. ಹುಡುಗಿಯ ಹೇಳಿಕೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಆಕೆ ತನ್ನ ಗ್ರಾಮಕ್ಕೆ ಹಿಂತಿರುಗಿ ತನ್ನ ಹೆತ್ತವರೊಂದಿಗೆ ಇರಲು ಒಪ್ಪಿದರೆ, ನಾವು ಆಕೆಯನ್ನು ಕಳುಹಿಸುತ್ತೇವೆ. ಇಲ್ಲದಿದ್ದರೆ, ಆಕೆ ಬಾಲ ಮಂದಿರದಲ್ಲಿಯೇ ಇದ್ದು, ಅಲ್ಲಿಂದಲೇ ಶಾಲೆಗೆ ಹೋಗುತ್ತಾಳೆಂದು ಹೇಳಿದ್ದಾರೆ.
ಘಟನೆಗೆ ಸಂಬಂಧಸಿದಂತೆ ಐವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಸಿದ್ದು, ಈ ಪೈಕಿ ಬಾಲಕಿ ತಾಯಿ, ತಾಳಿ ಕಟ್ಟಲು ಯತ್ನಿಸಿದ ವರ ಹಾಗೂ ಸಂಬಂಧಿಕರು ಇದ್ದಾರೆಂದು ತಿಳಿದುಬಂದಿದೆ.
Advertisement