ಜಾತಿ ಗಣತಿ ಮರು ಸಮೀಕ್ಷೆ ಹೈಕಮಾಂಡ್ ನಿರ್ಧಾರ, ನನ್ನದಲ್ಲ: ಸಿಎಂ ಸಿದ್ದರಾಮಯ್ಯ

ಜಾತಿಗಣತಿ ನಡೆಸುವ ವಿಚಾರ ಹೈಕಮಾಂಡ್ ಸೂಚನೆ ಕೊಟ್ಟಿದೆ. ಅದರಂತೆ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ ನಡೆಸಲಿದೆ.
Siddaramaiah
ಸಿಎಂ ಸಿದ್ದರಾಮಯ್ಯ
Updated on

ಚಿಕ್ಕಬಳ್ಳಾಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮರು ಗಣತಿ ನಡೆಸುವ ಸೂಚನೆಯ್ನು ಹೈಕಮಾಂಡ್ ನೀಡಿದ್ದು, ಇದು ನನ್ನ ತೀರ್ಮಾನವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸ್ಪಷ್ಪಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಕ್ಕೆ ಕುಸುಮ್ ಯೋಜನೆ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಈ ವೇಳೆ ಹೆಲಿಪ್ಯಾಡ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿ ನಡೆಸುವ ವಿಚಾರ ಹೈಕಮಾಂಡ್ ಸೂಚನೆ ಕೊಟ್ಟಿದೆ. ಅದರಂತೆ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ ನಡೆಸಲಿದೆ ಎಂದು ಹೇಳಿದರು.

ಜಾತಿ ಗಣತಿ ನಡೆದಿದ್ದು 2015ರಲ್ಲಿ. ಈಗ 10 ವರ್ಷಗಳಾಗಿವೆ. ಆದ್ದರಿಂದ ಮರು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ. ಕಾಂತರಾಜು ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದು, ವರದಿಯನ್ನು ಪೂರ್ಣವಾಗಿ ಕಡೆಗಣಿಸಿಲ್ಲ. ಕೆಲವು ಬದಲಾವಣೆಗಳೊಂದಿಗೆ 60ರಿಂದ 70 ದಿನಗಳಲ್ಲಿ ಮರು ಸಮೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ಸಾಕಷ್ಟು ಮಂದಿ ಮೃತಪಟ್ಟಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಗುಜರಾತ್ ನ ಗೋದ್ರಾದಲ್ಲೂ ನೂರಾರು ಮಂದಿ ಜನ ಸತ್ತರು. ಕುಂಭಮೇಳದಲ್ಲೂ ಕಾಲ್ತಳಿತವಾಗಿದೆ. ಸೇತುವೆ ಕುಸಿದು ಜನ ಸತ್ತಿದ್ದಾರೆ. ಆಗ ಯಾರಾದರೂ ರಾಜೀನಾಮೆ ಕೊಟ್ಟರಾ ಎಂದು ವಾಗ್ದಾಳಿ ನಡೆಸಿದರು.

Siddaramaiah
ಮರು ಜಾತಿ ಗಣತಿಗೆ ನಿರ್ಧಾರ: ಈಗಾಗಲೇ ಖರ್ಚು ಮಾಡಿರುವ 160 ಕೋಟಿ ರೂ ಹಣ ವ್ಯರ್ಥವೆಂದು ಒಪ್ಪಿಕೊಳ್ಳಲಿದೆಯೇ ರಾಜ್ಯ ಸರ್ಕಾರ?

ಬಿಜೆಪಿ ರಾಜಕೀಯವಾಗಿ ನಮ್ಮನ್ನು ಟೀಕೆ ಮಾಡುತ್ತಿದೆ. ಮಾಡಿಕೊಳ್ಳಲಿ ನಾವು ಜನರ ಪರವಾಗಿದ್ದೇವೆ. ಗ್ಯಾರಂಟಿಗಳಾಗಿ ಹಣ ಹೊಂದಿಸುವುದರ ಜೊತೆಗೆ ಅಭಿವೃದ್ಧಿಗೂ ಹಣ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ದೇಶದಲ್ಲಿ ಮೋದಿ ಆಡಳಿತದಿಂದ ಬಡತನ ಎಲ್ಲೂ ಇಳಿಕೆ ಕಂಡಿಲ್ಲ. ಕಾಂಗ್ರೆಸ್ ಆಳ್ವಿಕೆಯಲ್ಲಿ ಜಾರಿಗೆ ತಂದ ಗರೀಬಿ ಹಠಾವೋ ಕಾರ್ಯಕ್ರಮಗಳಿಂದ ಬಡತನ ಕಡಿಮೆಯಾಗುತ್ತಾ ಬರುತ್ತಿದೆ ಎಂದರು.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು. ಸದ್ಯದಲ್ಲೇ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾಯಿತ ಜನ ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು ಇದೇ ವೇಳೆ ಸಿಎಂ ಮಾಹಿತಿ ನೀಡಿದರು.

ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳ ಪೈಕಿ ಶೇಕಡ 50 ರಷ್ಟು ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಆದರೆ, ಕೇಂದ್ರದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗುತ್ತಿದೆ. ಹತ್ತರಷ್ಟು ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ಟೀಕಿಸಿದರು.

ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಇ.ಡಿ ದಾಳಿ ಕುರಿತು ಪ್ರತಿಕ್ರಿಯಿಸಿ, ಕಾನೂನು ಬದ್ಧವಾಗಿ ಇಡಿ ದಾಳಿ ಮಾಡಿ ತನಿಖೆ ಮಾಡಲಿ, ನಮ್ಮ ಅಭ್ಯಂತರ ಇಲ್ಲ. ಆದರೆ, ರಾಜಕೀಯ ದುರುದ್ದೇಶದಿಂದ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com