
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡ ಸಂತ್ರಸ್ತರು ಮತ್ತು ಮೃತರ ಕುಟುಂಬಗಳು ಸೇರಿದಂತೆ ಡಜನ್ಗಟ್ಟಲೆ ಸಾರ್ವಜನಿಕರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ(ಡಿಸಿ) ಜಗದೀಶ್ ಜಿ ಅವರ ಮುಂದೆ ಬುಧವಾರ ಹಾಜರಾದರು.
ಇಂದು ಜಿಲ್ಲಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ ಕೆಲವು ಸಂತ್ರಸ್ತರ ಪ್ರಕಾರ, ದುರಂತಕ್ಕೆ ಕಳಪೆ ನಿರ್ವಹಣೆಯೇ ಕಾರಣ ಎಂದು ಹೇಳಿದ್ದಾರೆ.
ಕುತ್ತಿಗೆ ಮತ್ತು ಕಾಲಿಗೆ ಗಾಯಗಳಾಗಿರುವ ಆಸ್ಟಿನ್ ಪಟ್ಟಣದ ನಿವಾಸಿ ಸೈಯದ್ ಅಬು ಜಾಫರ್ ಹೇಳುವಂತೆ, ಕೆಲವು ಖಾಸಗಿ ವ್ಯಕ್ತಿಗಳು ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ನಡೆಸಿದರು ಮತ್ತು ಪೊಲೀಸರು ಅವರನ್ನು ಸಮರ್ಥಿಸಿಕೊಂಡರು ಎಂದು ಹೇಳಿದ್ದಾರೆ.
"ಅವರೂ ಮನುಷ್ಯರೇ. ಅವರು ಅಷ್ಟು ದೊಡ್ಡ ಜನಸಂದಣಿಯನ್ನು ನಿರ್ವಹಿಸಲು ಸಾಧ್ಯವಿಲ್ಲ. ತಳ್ಳಾಟದ ನಡುವೆ ಕೆಲವರಿಗೆ ಟಿಕೆಟ್‌ಗಳನ್ನು ನೀಡಿ ಒಳಗೆ ಪ್ರವೇಶಿಸಲು ಅನುಮತಿ ನೀಡಿದರೆ, ಇನ್ನೂ ಕೆಲವು ಖಾಸಗಿ ವ್ಯಕ್ತಿಗಳು ಲಾಠಿ ಪ್ರಹಾರ ಮಾಡುತ್ತಿದ್ದರು" ಎಂದು ಅವರು ತಿಳಿಸಿದ್ದಾರೆ.
ಕ್ರೀಡಾಂಗಣದಲ್ಲಿ ಸಂಬಂಧಪಟ್ಟವರಿಂದ ಸಹಾಯಕ್ಕಾಗಿ ಅವರು ಸಂಪರ್ಕಿಸಿದಾಗ ಯಾರೂ ಸಹಾಯ ಮಾಡಲಿಲ್ಲ ಎಂದು ಸಂತ್ರಸ್ತರು ಹೇಳಿದ್ದಾರೆ.
"ನಾನು ಗೇಟ್ ಸಂಖ್ಯೆ 21 ರಲ್ಲಿ ಬಿದ್ದೆ ಮತ್ತು ಜನರು ನನ್ನ ಕುತ್ತಿಗೆ ಮತ್ತು ಕಾಲಿನ ಮೇಲೆ ಕಾಲು ಇಟ್ಟು ತುಳಿದಾಡಿದರು. ಆದರೂ ನಾನು ಹೊರಬಂದು ಸಹಾಯ ಕೇಳುವಲ್ಲಿ ಯಶಸ್ವಿಯಾದೆ. ಆದರೆ ಯಾರೂ ಸಹಾಯ ಮಾಡಲಿಲ್ಲ. ಎರಡೂವರೆ ಗಂಟೆಗಳ ಕಾಲ, ನಾನು ನೋವಿನಿಂದ ಬಳಲುತ್ತಿದ್ದೆ. ನಾನು ಕಬ್ಬನ್ ಪಾರ್ಕ್ ಸರ್ಕಲ್ ವರೆಗೆ ನಡೆದು ಆಟೋ ತೆಗೆದುಕೊಂಡು ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾದೆ" ಎಂದು ಜಾಫರ್ ತಿಳಿಸಿದ್ದಾರೆ.
ಜೂನ್ 3 ರಂದು ಕಾಲ್ತುಳಿತದಲ್ಲಿ ಮೃತಪಟ್ಟ ತಮಿಳುನಾಡಿನ ತಿರುಪ್ಪೂರು ಮೂಲದ ಕಾಮಚ್ಚಿ ಎಂಆರ್ ಅವರ ಸೋದರಸಂಬಂಧಿ ವೀರಬಾಹು ಅವರೊಂದಿಗೆ ಜಿಲ್ಲಾಧಿಕಾರಿ ಸಂವಾದ ನಡೆಸಿದರು. ಕರ್ನಾಟಕ ಸರ್ಕಾರದಿಂದ ನೀಡಲಾದ ಪರಿಹಾರವನ್ನು ಅವರು ಪಡೆದಿರುವುದಾಗಿ ಸಂತ್ರಸ್ತರು ಹೇಳಿದ್ದಾರೆ.
ಅದೇ ರೀತಿ ಸಿವಿಲ್ ಎಂಜಿನಿಯರ್ ಮೋನಿಶ್ ಗೌಡ ಅವರು ಉಚಿತ ಪ್ರವೇಶದ ಬಗ್ಗೆ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿದ ತಕ್ಷಣ ಗೇಟ್ ಸಂಖ್ಯೆ 21ಕ್ಕೆ ಹೋಗಲು ಯತ್ನಿಸಿ ಕೆಳಗೆ ಬಿದ್ದರು. "ಸಂಜೆ 5.20 ರವರೆಗೆ ಕಾಲ್ತುಳಿತ ಘಟನೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ಏಕೆಂದರೆ ನನ್ನ ಫೋನ್‌ನಲ್ಲಿ ನೆಟ್‌ವರ್ಕ್ ಇರಲಿಲ್ಲ. ನಂತರ ನನ್ನ ತಂದೆ ಫೋನ್ ಮಾಡಿ ಘಟನೆಯ ಬಗ್ಗೆ ನನಗೆ ತಿಳಿಸಿ, ಸುರಕ್ಷಿತ ಸ್ಥಳಕ್ಕೆ ತೆರಳಲು ಹೇಳಿದರು. ನಾನು ಹೊರಬರಲು ಪ್ರಯತ್ನಿಸಿದಾಗ, ನನ್ನ ಕಾಲಿಗೆ ಬ್ಯಾರಿಕೇಡ್ ಬಡಿದು ಕೆಳಗೆ ಬಿದ್ದೆ. ನಂತರ ನನಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ದಿನ ಘಟನೆ ಹೇಗೆ ನಡೆಯಿತು ಎಂದು ಡಿಸಿ ಕೇಳಿದರು. ಅದರಲ್ಲಿ ಯಾರ ತಪ್ಪು ಇದೆ ಎಂದು ಅವರು ಕೇಳಿದರು. ಪೊಲೀಸರು ಆರ್‌ಸಿಬಿ ಬಸ್‌ಗೆ ದಾರಿ ಮಾಡಿಕೊಡಲು ಪ್ರಯತ್ನಿಸಿದಾಗ, ತಳ್ಳಾಟ ಹೆಚ್ಚಾಯಿತು ಮತ್ತು ಅದು ಘಟನೆಗೆ ಕಾರಣವಾಯಿತು ಎಂದು ನಾನು ಅವರಿಗೆ ಹೇಳಿದೆ. ಅದೇ ದಿನ ರಾತ್ರಿ 11.30 ರ ಹೊತ್ತಿಗೆ, ನನ್ನನ್ನು ಮಿಲ್ಲರ್ಸ್ ರಸ್ತೆಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಡಿಸಿ ಕಚೇರಿಯ ಪ್ರಕಾರ, ಇಂದು 14 ಜನ ಜಿಲ್ಲಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಗಾಯಾಳುಗಳಿಗೆ ಯಾವುದೇ ಶುಲ್ಕ ವಿಧಿಸದಂತೆ ನೋಡಿಕೊಳ್ಳಲು ಡಿಸಿ, ಜಿಲ್ಲಾ ಆರೋಗ್ಯ ಅಧಿಕಾರಿ ಮೇಟಿ ಅವರಿಗೆ ಸೂಚಿಸಿದ್ದಾರೆ.
Advertisement