
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಡಿಜಿಟಲ್ ರೂಪಾಂತರ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು, ಸಾರಿಗೆ ಸಂಸ್ಥೆಯ ಏಕೀಕೃತ ಪಾವತಿ ಇಂಟರ್ಫೇಸ್ (UPI) ವಹಿವಾಟುಗಳು ಶೇ,50ಕ್ಕೆ ತಲುಪುತ್ತಿದೆ.
ಯುಪಿಐ ಸೇವೆ ಆರಂಭಿಸುವ ಸಮಯದಲ್ಲಿ ಸಂಸ್ಥೆಯು ಶೇ.30ರಷ್ಟು ಆದಾಯ ತಲುಪುವ ಗುರಿಯನ್ನು ಹೊಂದಿತ್ತು. ಆದರೆ, ಇದೀಗ ಶೇ.50 ಹತ್ತಿರಕ್ಕೆ ತಲುಪಿದೆ ಎಂದು BMTC ಮುಖ್ಯ ಸಂಚಾರ ವ್ಯವಸ್ಥಾಪಕ ಜಿ ಟಿ ಪ್ರಭಾಕರ್ ರೆಡ್ಡಿ ಅವರು ಹೇಳಿದ್ದಾರೆ.
BMTC QR-ಆಧಾರಿತ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಬಸ್ ನಿರ್ವಾಹಕರು ವಿರೋಧ ವ್ಯಕ್ತಪಡಿಸಿದ್ದರು. ಜನರು QR ಕೋಡ್‌ಗಳ ಮೂಲಕ ಟಿಕೆಟ್‌ಗಳಿಗೆ ಪಾವತಿ ಮಾಡಲು ಸಿದ್ಧರಿದ್ದರೂ, ಕಂಡಕ್ಟರ್‌ಗಳು ನಿರಾಕರಿಸುತ್ತಿದ್ದರು. ನಗದು ನಗದು ಪಾವತಿಗಳಿಗೆ ಮಾತ್ರ ಒತ್ತಾಯಿಸುತ್ತಿದ್ದರು.
UPI ಪಾವತಿ ಬಗ್ಗೆ ಸಾಕಷ್ಟು ಗೊಂದಲಗಳು ಶುರುವಾಗಿತ್ತು. ನಂತರ ನಿರ್ವಾಹಕರಿಗೆ ತರಬೇತಿ ಕಾರ್ಯಕ್ರಮಗಳ ನಡೆಸಿ ಅರ್ಥೈಸಲಾಯಿತು.
ಯುಪಿಐ ಪಾವತಿಯನ್ನು ಹೇಗೆ ಸ್ವೀಕರಿಸಬೇಕು ಮತ್ತು ಪಾವತಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ದೃಢೀಕರಿಸುವುದು ಎಂಬುದರ ಕುರಿತು ತಮ್ಮ ಕಂಡಕ್ಟರ್‌ಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನೀಡಲಾಯಿತು. ಇದೀಗ ಪ್ರಯಾಣಿಕರು ಹಾಗೂ ನಿರ್ವಾಹಕರಿಬ್ಬರೂ ಯುಪಿಐ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರಿಂದ ಆದಾಯ ಹೆಚ್ಳವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಯುಪಿಐ ಮೂಲಕ ಸಾರಿಗೆ ಸಂಸ್ಥೆಗೆ ಬರುತ್ತಿರುವ ಆದಾಯ ಕುರಿತ ಮಾಹಿತಿಯನ್ನು ರೆಡ್ಡಿಯವರು ಹಂಚಿಕೊಂಡಿದ್ದಾರೆ.
ಬಿಎಂಟಿಸಿಯ ದೈನಂದಿನ ಟಿಕೆಟ್ ಆದಾಯ ಸುಮಾರು 3 ಕೋಟಿ ರೂ. ಆಗಿದೆ. ಜನವರಿಯಲ್ಲಿ, ಮಾಸಿಕ ಯುಪಿಐ ಪಾವತಿಗಳು 10 ಕೋಟಿ ರೂ. ಆಗಿದ್ದು, ಫೆಬ್ರವರಿಯಲ್ಲಿ 19 ಕೋಟಿ ರೂ., ಮಾರ್ಚ್‌ನಲ್ಲಿ 21 ಕೋಟಿ ರೂ. ಮತ್ತು ಏಪ್ರಿಲ್‌ನಲ್ಲಿ 24 ಕೋಟಿ ರೂ. ಆದಾಯ ಬಂದಿದೆ.
ಇನ್ನು ಮೇ ತಿಂಗಳಲ್ಲಿ ದಾಖಲೆಯ 29.5 ಕೋಟಿ ರೂ. ಆದಾಯ ಬಂದಿದ್ದು. ಈ ಮೂಲಕ ಯುಪಿಐ ಮೂಲಕ ಶೇ.42 ರಷ್ಟು ಆದಾಯ ಬಂದಿದೆ. ಜೂನ್ ತಿಂಗಳಿನಲ್ಲಿ ಶೇ.45ರಷ್ಟು ದಾಟುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement