
ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಆನ್‌ಲೈನ್ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಬಲಿಯಾಗುತ್ತಿದ್ದಾರೆ, ಆದರೆ ಹೆಚ್ಚಿನ ಪೋಷಕರು, ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳು ಸಹ ಅಂತಹ ಬೆದರಿಕೆಗಳನ್ನು ನಿರ್ವಹಿಸಲು ಅಥವಾ ತಡೆಯಲು ಸಜ್ಜಾಗಿಲ್ಲ ಎಂದು ರಾಜ್ಯಮಟ್ಟದ ಅಧ್ಯಯನದಿಂದ ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಚೈಲ್ಡ್‌ಫಂಡ್ ಇಂಡಿಯಾದ ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿದ ಆನ್‌ಲೈನ್ ಲೈಂಗಿಕ ಶೋಷಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಮೇಲೆ ಕೇಂದ್ರೀಕರಿಸಿದ ಈ ಅಧ್ಯಯನವು ಮಕ್ಕಳ ಆನ್‌ಲೈನ್ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಿದೆ, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ರೋಗದ ನಂತರ, ಸಂಶೋಧನೆಗಳ ಪ್ರಕಾರ, ಮಕ್ಕಳಲ್ಲಿ ಸ್ಕ್ರೀನ್ ಸಮಯ ಹೆಚ್ಚಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇಂಟರ್ನೆಟ್ ಬಳಕೆ ಬಗ್ಗೆ ಬೆಳಕು ಚೆಲ್ಲಿದೆ.
ಈ ಅಧ್ಯಯನವು ಕರ್ನಾಟಕದ ಐದು ಜಿಲ್ಲೆಗಳಾದ ಬೆಂಗಳೂರು, ಚಾಮರಾಜನಗರ, ರಾಯಚೂರು, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ 8–18 ವರ್ಷ ವಯಸ್ಸಿನ 903 ಶಾಲಾ ಮಕ್ಕಳನ್ನು ಬಹು-ಹಂತದ ಮಾದರಿಯಲ್ಲಿ ಬಳಸಿಕೊಂಡು ಸಮೀಕ್ಷೆ ನಡೆಸಿತ್ತು.
ಪ್ರತಿ ಜಿಲ್ಲೆಯಿಂದ ಆರು ಶಾಲೆಗಳನ್ನು ಆಯ್ಕೆ ಮಾಡಲಾಯಿತು ಮತ್ತು ಪ್ರತಿ ಶಾಲೆಯಿಂದ 30 ವಿದ್ಯಾರ್ಥಿಗಳನ್ನು ಸಂದರ್ಶಿಸಲಾಯಿತು, 8–11, 12–14 ಮತ್ತು 15–18 ವರ್ಷ ವಯಸ್ಸಿನ ಮೂರು ವಯೋಮಾನದ ಗುಂಪುಗಳನ್ನು ಒಳಗೊಂಡಿದೆ.
ಡಿಜಿಟಲ್ ಜನಪ್ರಿಯತೆಯ ಆಕರ್ಷಣೆಯಿಂದಾಗಿ, ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಆರು ಹದಿಹರೆಯದವರಲ್ಲಿ ಒಬ್ಬರು ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹತ್ತರಲ್ಲಿ ಒಬ್ಬರು (17% ಹುಡುಗರು ಮತ್ತು 4% ಹುಡುಗಿಯರು) ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಹೋಗಿದ್ದಾರೆ. ನಗರ ಪ್ರದೇಶಕ್ಕಿಂತ (9%) ಗ್ರಾಮೀಣ ಪ್ರದೇಶಗಳಲ್ಲಿ (12%) ಹೆಚ್ಚಿನ ಸಂಖ್ಯೆಯ ಮಕ್ಕಳು ಆಫ್‌ಲೈನ್‌ನಲ್ಲಿ ಅಪರಿಚಿತರನ್ನು ಭೇಟಿಯಾಗಿದ್ದಾರೆ ಎಂದು ಕಂಡುಬಂದಿದೆ.
ಇನ್ನೂ ಕಳವಳಕಾರಿ ಸಂಗತಿಯೆಂದರೆ, ಶೇ. 1 ರಷ್ಟು ಮಕ್ಕಳು ಆನ್‌ಲೈನ್ ಅಪರಿಚಿತರೊಂದಿಗೆ ಆತ್ಮೀಯ ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಶೇ7 ರಷ್ಟು ಮಕ್ಕಳು ತಮ್ಮ ಪೂರ್ಣ ಹೆಸರು, ಫೋನ್ ಸಂಖ್ಯೆ, ವೈಯಕ್ತಿಕ ಫೋಟೋಗಳು, ಮನೆ ವಿಳಾಸ ಮತ್ತು ವೈಯಕ್ತಿಕ ವೀಡಿಯೊಗಳು ಸೇರಿದಂತೆ ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಸಂಶೋಧನೆಗಳ ಪ್ರಕಾರ, 15-18 ವರ್ಷ ವಯಸ್ಸಿನವರು ಅಸುರಕ್ಷಿತ ಸಂವಹನಗಳಿಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಕಂಡುಬಂದಿದೆ. ಅವರಲ್ಲಿ ಸುಮಾರು ಶೇ.5ರಷ್ಟು ಜನರು ಆನ್‌ಲೈನ್ ಕೆಟ್ಟ ಅನುಭವಗಳಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. ಅಂತಹ ಪ್ರಕರಣಗಳಲ್ಲಿ 77% Instagram ನಿಂದ ಉಂಟಾಗಿದೆ. ಶೇ. 53ರಷ್ಟು ಜನರು ಅಪರಿಚಿತರು ಎಂದು ಹೇಳಿದರೆ, 35% ಜನರು ಅದು ತಮಗೆ ತಿಳಿದಿರುವ ಪರಿಚಿತರಾಗಿದ್ದಾರೆ ಎಂದು ಹೇಳಿದರು. ಶೇ. 12 ರಷ್ಟು ಜನರು ಪರಿಚಿತರು ಮತ್ತು ಅಪರಿಚಿತರಿಂದ ಮುಜುಗರಕ್ಕೊಳಗಾಗಿದ್ದಾರೆ .
ಆದರೆ ಕೇವಲ ಶೇ. 34 ರಷ್ಟು ಪೋಷಕರು ಮಾತ್ರ ಪೊಲೀಸರಿಗೆ ವರದಿ ಮಾಡುವಂತಹ ಔಪಚಾರಿಕ ಕ್ರಮ ಕೈಗೊಂಡರು. ಹೆಚ್ಚಿನವರು ಅಪರಾಧಿಯನ್ನು ನಿರ್ಬಂಧಿಸಲು ಅಥವಾ ಚಾಟ್ ಹಿಸ್ಟರಿ ಅಳಿಸಲು ಆದ್ಯತೆ ನೀಡಿದರು.
Advertisement