
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಪಡೆಲು ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಇದರಡಿ ಯಾವುದೇ ಡಿಬಿಟಿ (ನಗದು ನೇರ ವರ್ಗಾವಣೆ) ಹಣ ವರ್ಗಾವಣೆಗೆ ಆಧಾರ್ ಸಂಖ್ಯೆ ಅಗತ್ಯವಿರುವ ಹಿನ್ನೆಲೆಯಲ್ಲಿ ಡಯಾಲಿಸಿಸ್ ಸೇವೆಯ ಪ್ರಯೋಜನ ಪಡೆಯಲು ಬಯಸುವವರು ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು ಎಂದು ತಿಳಿಸಿದೆ.
ಆದಾಗ್ಯೂ, ಆಧಾರ್ ಇಲ್ಲದ ಕಾರಣ ಯಾವುದೇ ವ್ಯಕ್ತಿ, ವಯಸ್ಕ ಅಥವಾ ಮಗುವಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ. ಅಂತಹ ಸಂದರ್ಭಗಳಲ್ಲಿ ಇತರ ಗುರುತಿನ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ಹೇಳಿದೆ.
ಇತರೆ ದಾಖಲೆಗಳ ಆಧಾರದ ಮೇಲೆ ಸೌಲಭ್ಯ ನೀಡಿದ ಸಂದರ್ಭದಲ್ಲಿ ಅದನ್ನು ದಾಖಲಿಸಲು ಪ್ರತ್ಯೇಕ ರಿಜಿಸ್ಟಾರ್ ನಿರ್ವಹಿಸಬೇಕು. ಅನುಷ್ಠಾನ ಏಜೆನ್ಸಿಯ ಮೂಲಕ ನಿಯಮಿತವಾಗಿ ಪರಿಶೀಲಿಸಿ ಲೆಕ್ಕಪರಿಶೋಧನೆ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ವ್ಯಕ್ತಿ ಆಧಾರ್ ಹೊಂದಿಲ್ಲದ್ದರೆ ಅಥವಾ ಈವರೆಗೆ ಆಧಾರ್‌ಗೆ ನೋಂದಣಿ ಆಗದಿದ್ದು, ಆಧಾರ್ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಆಧಾರ್ ಪಡೆಯಲು ಅರ್ಹರಾಗಿದ್ದರೆ ಅವರು ಆಧಾರ್‌ಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಫಲಾನುಭವಿಗಳು ಮಕ್ಕಳಾಗಿದ್ದರೆ ತನ್ನ ತಂದೆ, ತಾಯಿ ಅಥವಾ ಪೋಷಕರ ಒಪ್ಪಿಗೆಗೆ ಒಳಪಟ್ಟು ಆಧಾರ್ ನೋಂದಣಿಗೆ ಅರ್ಜಿ ಸಲ್ಲಿಸಬೇಕು.
ಒಂದೊಮ್ಮೆ ಅವರ ಸಮೀಪದಲ್ಲಿ ಆಧಾರ್ ನೋಂದಣಿ ಕೇಂದ್ರ ಇಲ್ಲದಿದ್ದರೆ ಇಲಾಖೆಯು ಯೋಜನೆ ಅನುಷ್ಠಾನಗೊಳಿಸುತ್ತಿರುವ ಏಜೆನ್ಸಿಯ ಮೂಲಕ ಆಧಾರ್ ನೋಂದಣಿ ಕೇಂದ್ರದ ಸೌಲಭ್ಯವನ್ನು ಅನುಕೂಲಕರ ಸ್ಥಳಗಳಲ್ಲಿ ನೀಡಬೇಕು.
ಆಧಾರ್ ಸಿಗುವವರೆಗೆ 5 ವರ್ಷದೊಳಗಿನ ಮಕ್ಕಳು ಆಧಾರ್ ದಾಖಲಾತಿ ಗುರುತಿನ ಚೀಟಿ ಅಥವಾ ಬಯೋಮೆಟ್ರಿಕ್ ನವೀಕರಣ ಗುರುತಿನ ಚೀಟಿ ನೀಡುವ ಷರತ್ತಿನೊಂದಿಗೆ ಜನನ ಪ್ರಮಾಣಪತ್ರ ಅಥವಾ ಸಕ್ಷಮ ಪ್ರಾಧಿಕಾರದಿಂದ ವಿತರಿಸಿರುವ ಜನನ ದಾಖಲೆ ಅಥವಾ ಶಾಲೆಯ ಮುಖ್ಯಸ್ಥರಿಂದ ಸಹಿ ಮಾಡಿರುವ ಶಾಲಾ ಗುರುತಿನ ಚೀಟಿ ನೀಡಬಹುದು.
18 ವರ್ಷ ಮೇಲಟ್ಟವರಾದರೆ ಆಧಾರ್ ಪಡೆಯಲು ನೋಂದಣಿ ಮಾಡಿರುವ ಎನ್‌ರೋಲ್‌ಮೇಂಟ್ ಸಂಖ್ಯೆ ಚೀಟಿ ಹಾಗೂ ಈ ಭಾವಚಿತ್ರಹೊಂದಿರುವ ಬ್ಯಾಂಕ್ ಅಥವಾ ಅಂಚೆಕಚೇರಿ ಪಾಸ್‌ಬುಕ್, ಪ್ಯಾನ್, ಪಾಸ್‌ಪೋರ್ಟ್, ಪಡಿತರ ಚೀಟಿಯಂತಹ ಹತ್ತು ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬಹುದು. ಆಧಾರ್ ಬಯೋಮೆಟ್ರಿಕ್ ವಿಫಲವಾದರೆ ಕಣ್ಣು (ಐರಿಸ್) ಹಾಗೂ ಮುಖದ ದೃಢೀಕರಣ ಅಳವಡಿಸಿಕೊಳ್ಳಬೇಕು. ಅವೂ ವಿಫಲವಾದರೆ ಆಧಾರ್ ಓಟಿಪಿ ಪಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
Advertisement