
ಬೆಂಗಳೂರು: ಬೆಂಗಳೂರು ಕಾಲ್ತುಳಿತಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವ ರಾಜ್ಯ ಸರ್ಕಾರದ ಇಂಗಿತವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ. ತನಿಖೆ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯನ್ನು ಒತ್ತಿ ಹೇಳಿದೆ.
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು. ಈ ಕುರಿತ ಸ್ವಯಂ ಪ್ರೇರಿತ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ಮತ್ತು ನ್ಯಾಯಾಧೀಶ ಸಿಎಂ ಜೋಶಿ ಅವರನ್ನೊಳಗೊಂಡ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು.
ಸರ್ಕಾರದಿಂದ ಸಿದ್ಧಪಡಿಸಲಾಗಿರುವ ಮಧ್ಯಂತರ ಮೌಲ್ಯಮಾಪನ ವರದಿ ಮತ್ತು ಪ್ರಾಥಮಿಕ ತನಿಖೆ ಉಲ್ಲೇಖಿಸಿದ ಅಡ್ವೋಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಮಾಹಿತಿ ಬಹಿರಂಗಪಡಿಸುವಿಕೆಯಿಂದ ಸರ್ಕಾರ ಹಿಂಜರಿಕೆಯಿಂದ ಹಿಂದೆ ಸರಿಯುವುದಿಲ್ಲ. ಆದರೆ ನಡೆಯುತ್ತಿರುವ ವಿಚಾರಣೆಗಳನ್ನು ಪೂರ್ವಾಗ್ರಹದಿಂದ ತಪ್ಪಿಸಲು ಬಯಸಿದ್ದು, ಮುಂದಿನ ವಾರ ಎರಡು ವರದಿಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.
ವರದಿಯಲ್ಲಿನ ಕೆಲವು ಅವಲೋಕನಗಳು ಪ್ರಾಥಮಿಕ ಸ್ವರೂಪದ್ದಾಗಿದ್ದು, ಅಕಾಲಿಕವಾಗಿ ಬಹಿರಂಗಪಡಿಸಿದರೆ ಮಾಧ್ಯಮಗಳಿಂದ ಪ್ರಚೋದನೆಗೆ ಒಳಗಾಗಬಹುದು ಎಂದು ಅಡ್ವೊಕೇಟ್ ಜನರಲ್ ಹೇಳಿದರು. ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದನ್ನು ಪ್ರಶ್ನಿಸುತ್ತಿರುವುದಾಗಿ ಹೇಳಿದ ನ್ಯಾಯಾಲಯ, ಅಮಿಕಸ್ ಕ್ಯೂರಿಯನ್ನು ನೇಮಿಸುವ ನಿರ್ಧಾರವನ್ನು ಪ್ರಕಟಿಸಿತು.
ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸ್ಪಷ್ಟ ಆದ್ಯತೆ ನೀಡುವಂತೆ ಸೂಚಿಸಿತು. ಎಲ್ಲಾ ವರದಿ ಬರುವವರೆಗೂ 20 ರಿಂದ 25 ದಿನಗಳ ಕಾಲ ವಿಚಾರಣೆ ಮುಂದೂಡುವಂತೆ ಮುಂದೂಡುವಂತೆ ಎಜಿ ಕೋರಿದರು. ಆದರೆ, ಇದನ್ನು ಪರಿಗಣಿಸದ ನ್ಯಾಯಾಲಯ, ಕೆಎಸ್ ಸಿಎ, ಆರ್ ಸಿಬಿ ಮತ್ತು ಡಿಎನ್ ಎ ನೆಟ್ ವರ್ಕ್ ಗೆ ನೋಟಿಸ್ ನೀಡಲು ಆದೇಶಿಸಿತು. ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿತು.
Advertisement