
ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಠಗಳಿಗೆ ದೊಡ್ಡ ಪೆಟ್ಟು ಬಿದ್ದಿದ್ದು, ಉಚಿತ ಯೋಜನೆಗಳು ಆಶ್ರಮದ ಖರ್ಚು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.
ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಮಾತನಾಡಿರುವ ಅವರು, ಸಾರಿಗೆ ಸೌಲಭ್ಯಗಳು ಉಚಿತವಾಗಿರುವುದರಿಂದ ಹೆಚ್ಚಿನ ಜನರು ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಮಠದಲ್ಲಿ ಊಟ ಮಾಡುವವರ ಸಂಖ್ಯೆ ನೂರು ಪಟ್ಟು ಹೆಚ್ಚಾಗಿದೆ. ಉಚಿತ ಯೋಜನೆಗಳು ಮಠದ ಖರ್ಚಿಗೆ ಹೊರೆಯಾಗಿವೆ. ಹೀಗಾಗಿ ಪುಣ್ಯಶ್ರಮಕ್ಕೆ ಸರ್ಕಾರ ಅನಾದಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರವು ಬೆಂಗಳೂರು ಬಳಿಯ ಕೆಲ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ಧವಸ ಧಾನ್ಯ ನೀಡುತ್ತಿದೆ. 500 ಕ್ವಿಂಟಲ್ ನಿಂದ 7 ಸಾವಿರ ಕ್ವಿಂಟಲ್ ವರೆಗೆ ಪ್ರತಿತಿಂಗಳು ಧವಸಧಾನ್ಯ ನೀಡುತ್ತಿದೆ. ಅದೇ ರೀತಿ ಉತ್ತರ ಕರ್ನಾಟಕದ ಆಶ್ರಮಗಳಿಗೂ ಕೊಡುಗೆ ನೀಡಬೇಕು. ಪುಣ್ಯಾಶ್ರಮದಕ್ಕೆ ಸಮಗ್ರ ಬೆಳವಣಿಗೆಗೆ ಸರ್ಕಾರ ಅನ್ನ, ಹಣ ನೀಡಬೇಕು ಎಂದು ಹೇಳಿದರು.
ಶ್ರೀಗಳ ಈ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಪಿಎಲ್ ಕಾರ್ಡ್‌ದಾರರು ಉಚಿತ ಅಕ್ಕಿ ಪಡೆಯುತ್ತಿದ್ದಾರೆ, ಉಚಿತ ಆಹಾರಕ್ಕೆ ಅವರು ಮಠಗಳಿಗೆ ಭೇಟಿ ನೀಡುವುದಿಲ್ಲ. ಮಧ್ಯಮ ವರ್ಗದವರು ಮತ್ತು ಶ್ರೀಮಂತರು ಊಟ ಅಥವಾ ಪ್ರಸಾದ ತಿನ್ನಲು ಮಠಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದಿಲ್ಲ. ಪ್ರಸಾದದ ಕುರಿತು ಜನರಿಗೆ ವಿಶೇಷ ಗೌರವವಿದೆ, ಅನೇಕ ಭಕ್ತರು ಮಠಗಳಿಗೆ ಅಕ್ಕಿ ಚೀಲಗಳು ಮತ್ತು ಇತರ ದಿನಸಿಗಳನ್ನು ದಾನ ಮಾಡುತ್ತಾರೆ. ಪಂಡಿತ್ ಪುಟ್ಟರಾಜ್ ಗವಾಯಿ ಮತ್ತು ಪಂಚಾಕ್ಷರಿ ಗವಾಯಿ ಅವರಂತಹ ಶ್ರೀಗಳು ಎಂತಹದ್ದೇ ಕಠಿಣ ಸಮಯವನ್ನು ಎದುರಿಸಿದ್ದರೂ ಈ ರೀತಿ ಮಾತನಾಡಿರಲಿಲ್ಲ ಎಂದು ಕಿಡಿಕಾರಿದ್ದಾರೆ.
Advertisement