
ಬೆಂಗಳೂರು: ನಗರದ ಬೇಗೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಶೌಚಗುಂಡಿ ಸ್ವಚ್ಚಗೊಳಿಸುವಾಗ ಅಸ್ಥಿಪಂಜರ ಸಿಕ್ಕಿದೆ. ಮೂಳೆಗಳು, ತಲೆಬುರುಡೆ ರೀತಿಯ ಭಾಗಗಳು ಪತ್ತೆಯಾಗಿದ್ದು, ಮಾಹಿತಿ ಮೇರೆಗೆ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ.
ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್ಸ್‌ನ ಪಾರ್ಕಿಂಗ್ ಸ್ಥಳದ ಪಕ್ಕದಲ್ಲಿರುವ ಹೊಂಡಗಳಲ್ಲಿ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ. ಸಿಕ್ಕ ಅಸ್ಥಿಪಂಜರ ಮನುಷ್ಯರದ್ದಾ ಅಥವಾ ಪ್ರಾಣಿಗಳಿದ್ದಾ ಎಂಬುದನ್ನು ಅರಿಯಲು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದಾರೆ.
ಬೇಗೂರಿನ ಕೈಗಾರಿಕಾ ಪ್ರದೇಶದ ಅಪಾರ್ಟ್ಮೆಂಟ್ವೊಂದರಲ್ಲಿ ಜೂನ್ 16ರಂದು ಗುತ್ತಿಗೆ ಕಾರ್ಮಿಕರು ಶೌಚಗುಂಡಿಗಳನ್ನು ಸ್ವಚ್ಚಗೊಳಿಸುವಾಗ ಅಸ್ಥಿಪಂಜರ ಕಂಡುಬಂದಿತ್ತು. ಇದನ್ನು ಕಂಡು ಅಪಾರ್ಟ್‌ಮೆಂಟ್ ನಿವಾಸಿಗಳು ಆತಂಕಗೊಂಡಿದ್ದರು. ಕಾರ್ಮಿಕರು ಈ ವಿಷಯವನ್ನು ಅಪಾರ್ಟ್ ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಕರಿಯಾ ಜಾನ್‌ಗೆ ತಿಳಿಸಿದರರು, ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಅಪಾರ್ಟ್‌ಮೆಂಟ್ ನಿರ್ಮಾಣವಾಗುವ ಆ ಜಾಗದ ಬಳಿ ಸ್ಮಶಾನವಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಎಸ್ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಅಸ್ಥಿಪಂಜರವು ಹಲವಾರು ವರ್ಷಗಳಷ್ಟು ಹಳೆಯದಾಗಿರಬಹುದು, ಆದರೆ ವಿಧಿವಿಜ್ಞಾನ ಪರೀಕ್ಷೆಗಳ ನಂತರ ನಿಖರವಾದ ವಿವರಗಳು ತಿಳಿಯಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಾನ್ ಅವರ ದೂರಿನ ಪ್ರಕಾರ, ಹೊಂಡಗಳು ನಿರುಪಯುಕ್ತವಾಗಿವೆ ಮತ್ತು ಆರ್‌ಡಬ್ಲ್ಯೂಎ ಶುಚಿಗೊಳಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಆಸ್ತಿಯಲ್ಲಿ 16 ಪರ್ಕೊಲೇಷನ್ ಹೊಂಡಗಳಿವೆ.
Advertisement