
ನವದೆಹಲಿ: ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಗುರುವಾರ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ಚಿತ್ರ ಪ್ರದರ್ಶನವಾದರೆ ಚಿತ್ರಮಂದಿರಗಳಿಗೆ ಸಾಕಷ್ಟು ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ನೀಡಿದ ಭರವಸೆಯನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ದಾಖಲಿಸಿಕೊಂಡಿದೆ.
ಒಬ್ಬರ ಹೇಳಿಕೆಯಿಂದ ಮತ್ತೊಬ್ಬರ ಭಾವನೆಗಳಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ ಚಿತ್ರ ಬಿಡುಗಡೆಯನ್ನು ಸ್ಥಗಿತಗೊಳಿಸುವುದು, ಸ್ಟ್ಯಾಂಡ್ ಅಪ್ ಶೋಗಳನ್ನು ರದ್ದುಗೊಳಿಸುವುದು ಅಥವಾ ಕಲಾವಿದ ಕವಿತೆ ವಾಚನವನ್ನು ತಡೆಯುವುದು ಬೇಡ ಎಂದು ಪೀಠ ಹೇಳಿದೆ.
ಚಿತ್ರ ಬಿಡುಗಡೆಗೆ ಬೆದರಿಕೆಯಾಗಿ ನಿಲ್ಲುವ ಯಾವುದೇ 'ವಿಭಜಕ ಶಕ್ತಿಗಳನ್ನು' ನಿಯಂತ್ರಿಸುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಚಿತ್ರ ಬಿಡುಗಡೆಗೆ ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದು, ಇದೀಗ ಯಾವುದೇ ಮಾರ್ಗಸೂಚಿಗಳು ಅಥವಾ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್, ಪಿಐಎಲ್ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಥಗ್ ಲೈಫ್ ಚಿತ್ರ ಬಿಡುಗಡೆ ಮಾಡದ ಕಾರಣಕ್ಕಾಗಿ ಜೂನ್ 17 ರಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಯಾವುದೇ ಗುಂಪುಗಳು ಅಥವಾ ಜಾಗೃತ ದಳಗಳು ಸಾರ್ವಜನಿಕ ಸ್ಥಳಗಳನ್ನು ನಿಯಂತ್ರಿಸಲು ಅಥವಾ ಪ್ರದರ್ಶನಗಳಿಗೆ ಅಡ್ಡಿಪಡಿಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಎಚ್ಚರಿಸಿತು.
ಕರ್ನಾಟಕದಲ್ಲಿ ಚಿತ್ರ ಪ್ರದರ್ಶನವಾಗದಿರುವುದನ್ನು ಪ್ರಶ್ನಿಸಿ ಎಂ ಮಹೇಶ್ ರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.
Advertisement