
ಬೆಳಗಾವಿ: ಬಸ್‍ನಲ್ಲಿ ಕಿಟಕಿ ಪಕ್ಕದ ಸಿಟಿಗಾಗಿ ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕರನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಟಿ ಬಸ್ ಟರ್ಮಿನಲ್ ಗೆ ಬರುತ್ತಿದ್ದ ಬಸ್ ನಲ್ಲಿ ಇಬ್ಬರು ಯುವಕರ ನಡುವೆ ಕಿಟಕಿ ಪಕ್ಕದ ಸೀಟ್ ಗಾಗಿ ಬುಧವಾರ ಜಗಳ ನಡೆದಿತ್ತು.
ಬಾಲಕ ಹಾಗೂ ಯುವಕ ಮಾಜ್ ಸನದಿ ನಡುವೆ ಗಲಾಟೆಯಾಗಿತ್ತು. ಈ ವೇಳೆ ಬಾಲಕ, ಕೇಂದ್ರ ಬಸ್ ನಿಲ್ದಾಣಕ್ಕೆ ತನ್ನ ಸ್ನೇಹಿತನನ್ನು ಕರೆಸಿಕೊಂಡು ಸನದಿಗೆ ಚಾಕು ಇರಿದು ಪರಾರಿಯಾಗಿದ್ದ. ಇದೀಗ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು, ಘಟನೆ ನಡೆಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದೇವೆ. ಇನ್ನೂ ಮುಂದೆ ಇಂತಹ ಅಪರಾಧ ತಡೆಗೆ ವಿಶೇಷ ತಂಡ ರಚನೆ ಮಾಡಿದ್ದೇವೆಂದು ಹೇಳಿದ್ದಾರೆ.
ಮಾರ್ಕೆಟ್ ಪ್ರದೇಶ, ಸಾರ್ವಜನಿಕವಾಗಿ ಮಾರಕಾಸ್ತ್ರಗಳ ಹಿಡಿದು ಓಡಾಡುವುದು, ವಾಹನಗಳಲ್ಲಿ, ಬ್ಯಾಗ್‍ಗಳಲ್ಲಿ ಇಟ್ಟುಕೊಂಡು ಓಡಾಡುವುದು ಕಂಡು ಬಂದರೆ, ಅವರನ್ನ ಕೂಡಲೇ ಬಂಧಿಸಲಾಗುವುದು. ಅಂತವರ ಮೇಲೆ ರೌಡಿಶೀಟರ್ ತೆರೆಯಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
Advertisement