
ಬೆಂಗಳೂರು: 2003 ರಿಂದ 2013 ರವರೆಗೆ ಇಂಧನ ಇಲಾಖೆಯು ಗ್ರಾಹಕರಿಂದ (ನಿಶ್ಚಿತ ಶುಲ್ಕಗಳು) ತೆರಿಗೆಯಾಗಿ ಸಂಗ್ರಹಿಸಿದ್ದ ಸುಮಾರು 800-1,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಮರು ಪಾವತಿಸಬೇಕಾಗಿದೆ.
ಕನಿಷ್ಠ ಸುಂಕದ ಮೇಲಿನ ತೆರಿಗೆ ಅಸಾಂವಿಧಾನಿಕವಾಗಿದ್ದು, ಅರ್ಜಿದಾರರು ಸರಿಯಾದ ದಾಖಲೆಗಳೊಂದಿಗೆ ಪಾವತಿಸಿದ ಹಣವನ್ನು ಪಡೆಯಬಹುದು ಎಂದು ಜೂನ್ 20 ರಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ತದನಂತರ ಕೈಗಾರಿಕೆಗಳು ಮತ್ತು ಗ್ರಾಹಕರು ತಮ್ಮ ಹಣ ಪಡೆಯಲು ಬಿಲ್ ಗಳನ್ನು ಸಂಗ್ರಹಿಸುತ್ತಿದ್ದಾರೆ. ಕೆಲವರು ಬಿಲ್ ವಿವರಗಳನ್ನು ಕೋರಿ ಎಸ್ಕಾಂಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಇದೊಂದು ಮಹತ್ವದ ತೀರ್ಪಾಗಿದ್ದು, ಗ್ರಾಹಕರ ಮೇಲೆ ಅನಗತ್ಯ ಶುಲ್ಕ ವಿಧಿಸುವಂತಿಲ್ಲ ಎಂಬುದನ್ನು ಸರಕಾರ ಗಮನಿಸಬೇಕು. ಈಗ, ಈ ಆದೇಶ ಬಳಸಿಕೊಂಡು ಕೈಗಾರಿಕೆಗಳು ಮರುಪಾವತಿ ಕೋರಿ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸುತ್ತವೆ. ಕೈಗಾರಿಕೆಗಳ ಸಂಸ್ಥೆಯು 17 ವರ್ಷಗಳ ಸುದೀರ್ಘ ಹೋರಾಟ ನಡೆಸಿತು ಎಂದು ತಿಳಿಸಿದರು.
'ಹಲವು ಬಟ್ಟೆ ಉತ್ಪನ್ನಗಳ ಕೈಗಾರಿಕೆ ಮುಚ್ಚಿವೆ: 2009 ರಲ್ಲಿ ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯ್ದೆ 1959 ರ ಸೆಕ್ಷನ್ 3(1) ಗೆ ಮಾಡಿದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಎಫ್‌ಕೆಸಿಸಿಐ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಈ ತಿದ್ದುಪಡಿಗಳು 2003-13 ರಿಂದ ನಿಗದಿತ ಶುಲ್ಕಗಳು ಮತ್ತು ಬೇಡಿಕೆ ಶುಲ್ಕ ಹೆಚ್ಚಿಸಿದ್ದರಿಂದ ಗ್ರಾಹಕರ ಮೇಲೆ ಪರಿಣಾಮ ಬೀರಿತ್ತು.
ಇಂಧನ ತಜ್ಞ ಎಂ.ಜಿ.ಪ್ರಭಾಕರ್ ಮಾತನಾಡಿ, ಸರಕಾರ ಎಲ್ ಟಿ ಗ್ರಾಹಕರ ಮೇಲೆ ಪ್ರತಿ ಯೂನಿಟ್ ಗೆ 20 ಪೈಸೆ ಹಾಗೂ ಎಚ್ ಟಿ ಗ್ರಾಹಕರ ಮೇಲೆ ಶೇ.9ರಷ್ಟು ತೆರಿಗೆ ವಿಧಿಸಿದೆ. ಇದನ್ನು ಲೆಕ್ಕ ಹಾಕಿದರೆ ವಾರ್ಷಿಕ 60-100 ಕೋಟಿ ರೂ.ಗೂ ಅಧಿಕವಾಗಿದ್ದು, 10 ವರ್ಷಗಳಿಂದ ಈ ಮೊತ್ತ ಸಂಗ್ರಹವಾಗಿದೆ. ಗ್ರಾಹಕರು ವರ್ಷಾನುಗಟ್ಟಲೆ ಕಟ್ಟಿದ ಹಣದ ಮೇಲೆ ಬಡ್ಡಿಯನ್ನು ಸರ್ಕಾರಿ ಏಜೆನ್ಸಿಗಳಿಂದ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಕರ್ನಾಟಕ ಬಟ್ಟೆ ಗಿರಣಿಗಳ ಸಂಘದ ಅಧ್ಯಕ್ಷ ಸಿ ವಲ್ಲಿಯಪ್ಪ ಮಾತನಾಡಿ, ಹೆಚ್ಚಿನ ವಿದ್ಯುತ್ ದರದ ಶುಲ್ಕದಿಂದಾಗಿ ಅನೇಕ ಬಟ್ಟೆ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ ಎಂದು ತಿಳಿಸಿದರು.
ಸ್ಮಾರ್ಟ್ ಮೀಟರ್ ಅಳವಡಿಕೆಗೆ ಗ್ರಾಹಕರ ಮೇಲೆ ಸೆಸ್ ವಿಧಿಸುವ ಸರ್ಕಾರದ ಪ್ರಸ್ತಾವನೆ ಕುರಿತು ಮನವಿ ಸಲ್ಲಿಸುತ್ತಿರುವುದಾಗಿ ವಿವಿಧ ಕೈಗಾರಿಕೆಗಳ ಸಂಘಗಳ ಸದಸ್ಯರು ತಿಳಿಸಿದ್ದಾರೆ. ಇಂಧನ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, ಮರುಪಾವತಿಸಬೇಕಾದ ಹಣದ ಬಗ್ಗೆ ಪ್ರತಿಕ್ರಿಯಿಸಲು ಬಯಸಲ್ಲ. ಕೋರ್ಟ್ ಆದೇಶದ ಪ್ರತಿಯನ್ನು ಪರಿಶೀಲಿಸುತ್ತೇವೆ. ಕ್ಲಿಯರ್ ಮಾಡಬೇಕಾದ ಮೊತ್ತವು ಎಸ್ಕಾಮ್‌ಗಳ ಬಿಲ್‌ಗಳಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದರು.
Advertisement