ಬೆಂಗಳೂರಿನಲ್ಲಿ 60 ಸಾವಿರ ಪ್ರೇಕ್ಷಕರ ಸ್ಥಳಾವಕಾಶದ ನೂತನ ಸ್ಟೇಡಿಯಂ; ನಿರ್ಮಾಣಕ್ಕಾಗಿ 50 ಎಕರೆ ಜಾಗ ಗುರುತು: ಡಿ.ಕೆ ಶಿವಕುಮಾರ್

ನಾವುಗಳು ಯಾರೂ ಸಹ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕೆ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎನ್ನುವ ಮಾತನ್ನು ಮರೆಯಬಾರದು.
DK Shivakumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: 60 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಂತಹ ನೂತನ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು ಇದಕ್ಕಾಗಿ 50 ಎಕರೆ ಜಾಗ ಗುರುತಿಸಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳಿಸಿ 110 ಹಳ್ಳಿಗಳಿಗೆ ನೀರು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬಾಬು ಜಗಜೀವನ್ ರಾಮ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಅಂಗವಾಗಿ ನಡೆದ ನೂತನ ʼಕೆಂಪೇಗೌಡ ಭವನʼ ಭೂಮಿಪೂಜೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. 6ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಬೇಕಾದಷ್ಟು ಶ್ರಮ ಪಡುತ್ತಿದ್ದೇವೆ. ಸಿಕ್ಕಿರುವ ಅವಕಾಶದಲ್ಲಿ ಸಾಕ್ಷಿಗುಡ್ಡೆ ನಿರ್ಮಾಣ ಮಾಡಲಾಗುವುದು” ಎಂದರು.

ಹುಟ್ಟಿದಾಗ ಭೂಮಿ ಮೇಲಿರುತ್ತೇವೆ. ಸತ್ತಾಗ ಭೂಮಿ ಕೆಳಗಿರುತ್ತೇವೆ. ಆದರೆ ನಮ್ಮ ಸಾಧನೆಗಳು ಮೇಲಿರುತ್ತವೆ. ಅದೇ ರೀತಿ ಕೆಂಪೇಗೌಡರ ಸಾಧನೆಗಳು ಶಾಶ್ವತ. ಕೆಂಪೇಗೌಡರು ಹುಟ್ಟಿದ್ದು ಒಕ್ಕಲಿಗರಾಗಿ ಆದರೆ ಬದುಕು ನಡೆಸಿದ್ದು, ಸಮಾಜಕ್ಕೆ ಸಂದೇಶ ನೀಡಿದ್ದು ವಿಶ್ವಮಾನವರಾಗಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ವಿಶ್ವದೆಲ್ಲೆಡೆ ಬೆಂಗಳೂರಿನ ಕೀರ್ತಿ ಹರಡಿದೆ. ಈ ನಗರದ ಅಭಿವೃದ್ಧಿಗೆ ಕೆಂಪೇಗೌಡರೇ ಸ್ಫೂರ್ತಿ ಎಂಬುದನ್ನು ನಾವು ಮರೆಯಬಾರದು. 500 ವರ್ಷಗಳ ಹಿಂದೆಯೇ ಮಾದರಿ ಆಡಳಿತಕ್ಕೆ ಅಡಿಪಾಯ ಹಾಕಿದವರು. ಎಲ್ಲಾ ಜಾತಿ, ಧರ್ಮಗಳಿಗೆ ಅವಕಾಶ ನೀಡಿ ಸಮಾಜಕ್ಕೆ ಸಂದೇಶ ನೀಡಿದವರು” ಎಂದು ತಿಳಿಸಿದರು.

DK Shivakumar
ಬೆಂಗಳೂರು ಕಾಲ್ತುಳಿತ ಪ್ರಕರಣ: ಸರ್ಕಾರಕ್ಕೆ ಮುಜುಗರವಾಗುವ ಪ್ರಶ್ನೆಯಿಲ್ಲ; ಕ್ರಿಕೆಟ್ ಸ್ಟೇಡಿಯಂ ಬೇರೆಡೆಗೆ ಸ್ಥಳಾಂತರ?

ಬೆಂಗಳೂರು ನಗರದ ಅಭಿವೃದ್ಧಿ ತುಂಬಾ ಸರಳವಾದ ಕೆಲಸವಲ್ಲ. ಇಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ರೂಪ ನೀಡಬೇಕು ಎಂದು ನಾನು ಸಚಿವನಾದ ದಿನದಿಂದ ಪ್ರಯತ್ನ ಮಾಡುತ್ತಿದ್ದೇನೆ. ಸುಮಾರು 40 ಕಿಲೋ ಮೀಟರ್ ನಷ್ಟು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ರೂ.17 ಸಾವಿರ ಕೋಟಿ ವೆಚ್ಚದಲ್ಲಿ ಟೆಂಡರ್ ಗೆ ಸಿದ್ಧತೆ ಮಾಡುತ್ತಿದ್ದೇವೆ. 118 ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸುಮಾರು 1 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಮನೆ ಬಾಗಿಲಿಗೆ ʼನಂಬಿಕೆ ನಕ್ಷೆʼ ಎನ್ನುವ ಯೋಜನೆ ತಲುಪಿಸುತ್ತಿದ್ದೇವೆ. ಸುಮಾರು 25 ಲಕ್ಷ ಆಸ್ತಿ ದಾಖಲೆಗಳನ್ನು ಡಿಜೀಟಲೀಕರಣ ಮಾಡಿ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುತ್ತಿದೆ. ಕೃಷ್ಣ ಭೈರೇಗೌಡರ ಕ್ಷೇತ್ರದಲ್ಲಿ ಪ್ರಾಯೋಗಿಕ ಕೆಲಸ ನಡೆಯುತ್ತಿದೆ” ಎಂದರು.

“ನಗರದಲ್ಲಿ ಕಸದ ಮಾಫಿಯಾವನ್ನು ತಡೆಗಟ್ಟಲು ಪ್ರಯತ್ನ ಮಾಡಲಾಗುತ್ತಿದೆ. ನಗರದಲ್ಲಿ ಏನೂ ಕೊರತೆಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ. “ನಾವು ಮೂರು ʼಕೆʼಗಳನ್ನು ಮರೆಯಬಾರದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರು, ವಿಕಾಸ ಸೌಧ ಕಟ್ಟಿದ ಎಸ್.ಎಂ.ಕೃಷ್ಣ ಅವರು. ಬೆಂಗಳೂರು ಎಲ್ಲರಿಗೂ ಸೇರಿದ್ದು” ಎಂದು ಹೇಳಿದರು.

“ಕೆಂಪೇಗೌಡರ ಭವನ ನಿರ್ಮಾಣಕ್ಕೆ ಐದು ಎಕರೆ ಜಮೀನನ್ನು ಒಂದೇ ವಾರದಲ್ಲಿ ಕ್ಯಾಬಿನೆಟ್ ಮುಂದೆ ತಂದು ಒಪ್ಪಿಗೆ ಪಡೆಯಲಾಯಿತು. ಸಮಾಜಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಸಚಿವರಾದ ಮಹದೇವಪ್ಪ ಅವರಿಂದ ಒಪ್ಪಿಗೆ ಪಡೆದು ಈಗ ಭವ್ಯ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಮನಹಳ್ಳಿಯಲ್ಲಿ ಮೆಟ್ರೋ ಮಾರ್ಗ ಕೂಡ ಹಾದು ಹೋಗಲಿದೆ” ಎಂದು ಹೇಳಿದರು.

“ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ 100 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಕೆಂಪೇಗೌಡರ ಹೆಸರಿನಲ್ಲಿ ಭವ್ಯ ಕಟ್ಟಡ ನಿರ್ಮಾಣಕ್ಕೆ ಜಿಬಿಸಿಯಿಂದ 100 ಕೋಟಿ ಮೀಸಲಿಟ್ಟಿದ್ದೇವೆ. ಮೂರ್ನಾಲ್ಕು ಜನ ಕಟ್ಟಡ ವಾಸ್ತುಶಿಲ್ಪಿಗಳು ವಿನ್ಯಾಸ ನೀಡಿದ್ದಾರೆ. ಇದರ ಬಗ್ಗೆ ನಿರ್ಮಲಾನಂದನಾಥ ಶ್ರೀಗಳ ಗಮನಕ್ಕೂ ತರಲಾಗುವುದು” ಎಂದರು.

“ಕೆಂಪೇಗೌಡರ ಹೆಸರಿನಲ್ಲಿ ಇರುವ ನಮ್ಮ ವಿಮಾನ ನಿಲ್ದಾಣ ವಿಶ್ವಕ್ಕೆ ಮಾದರಿ. ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪನ ಮಾಡಿ ಅವರ ಹೆಸರನ್ನು ಉಳಿಸಿದ್ದೇವೆ. ಕೆಂಪೇಗೌಡರ ಹೆಸರಿನಲ್ಲಿ ಸಂಘಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ವೇಳೆ ನಾನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ನೀಡಿ ಎಂದು ಹೇಳಿದ್ದೆ. ಅದರಂತೆ ಅವರನ್ನು ಅಭಿನಂದಿಸಲಾಗಿದೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com