
ಬೆಂಗಳೂರು: ವಿಷಪ್ರಾಶನದಿಂದ ಹುಲಿಗಳು ಸಾವನ್ನಪ್ಪಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕೈಗೊಳ್ಳುವ ಭರವಸೆ ನೀಡಿದೆ.
ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತನಿಖೆ ಕೈಗೊಂಡು ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ನಡುವೆ ಶನಿವಾರ ಸಂಜೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಹುಲಿಗಳು ಸಾವು ಮತ್ತು ಇಲಾಖೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಲಿಗಳ ಹತ್ಯಾಕಾಂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಸುಗಳನ್ನ ಬೇಟೆಯಾಡಿ ತಿಂದಿದ್ದಕ್ಕೆ ವಿಷಪ್ರಾಶನ ಮಾಡಿ ಹುಲಿಗಳನ್ನ ಕೊಂದಿರುವ ಆರೋಪ ಕೇಳಿಬಂದಿದೆ.
4-5 ವರ್ಷದ ಹೆಣ್ಣು ಹುಲಿ ಅಸಹಜವಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶುಕ್ರವಾರ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಕಳೇಬರ ಪತ್ತೆ ಆಗಿದ್ದು, ವೈದ್ಯರು ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ತಿಳಿಸಿಸಿದ್ದಾರೆ.
Advertisement