
ಬೆಳಗಾವಿ: ಗೋ ರಕ್ಷಣೆ ಮಾಡಲು ಮುಂದಾದ ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಇಂಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋ ಶಾಲೆಯಿಂದ ಗೋವುಗಳನ್ನು ತೆಗೆದುಕೊಂಡು ಹೋಗಿದ್ದನ್ನು ನೋಡಿ 5 ಮಂದಿ ಶ್ರೀರಾಮ ಸೇನೆಯ (Sri Rama Sene) ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ದಲ್ಲಾಳಿಗಳು ಅವರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆಗಿದ್ದೇನು?
ಮೂಲಗಳ ಪ್ರಕಾರ ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನಲ್ಲಿ ಶುಕ್ರವಾರ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಕಾರ್ಯಕರ್ತರು ತಡೆದು ರಕ್ಷಿಸಿದರು. ಹಸುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಅವರು ಪೊಲೀಸ್ ಠಾಣೆಗೆ ಕರೆದೊಯ್ದು, ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿದರು.
ಆದರೆ ಹಸುಗಳನ್ನು ಸಾಗಿಸುತ್ತಿದ್ದ ಚಾಲಕ ಈ ಆರೋಪವನ್ನು ನಿರಾಕರಿಸಿದ್ದಾನೆ. ಹಸುಗಳನ್ನು ಹೈನುಗಾರಿಕೆಗೆ ಬಳಸಲಾಗುತ್ತಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೆ ಶ್ರೀರಾಮ ಸೇನೆ ಕಾರ್ಯಕರ್ತರೇ ತನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಹಣ ಸುಲಿಗೆ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾನೆ. ನಂತರ ಹಸುಗಳನ್ನು ಇಂಗಳಿ ಗ್ರಾಮದ ಆಶ್ರಯಕ್ಕೆ ಕಳುಹಿಸಲಾಯಿತು.
ಶನಿವಾರ ಸಂಜೆ, ಬಾಪುಸಾ ಮುಲ್ತಾನಿ ಎಂದು ಗುರುತಿಸಲಾದ ವ್ಯಕ್ತಿ ಗೋಶಾಲೆ (ಗೋ ಆಶ್ರಯ) ತಲುಪಿ ಅವುಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾನೆ. ಈ ಬಗ್ಗೆ ಕೇಳಿದ ಕಾರ್ಯಕರ್ತರು ಗೋಶಾಲೆಗೆ ಧಾವಿಸಿ ಮುಲ್ತಾನಿಯನ್ನು ಅವರ ಮನೆವರೆಗೂ ಹಿಂಬಾಲಿಸಿದ್ದಾರೆ. ಮನೆಗೆ ನುಗ್ಗಿ ಹಸುಗಳನ್ನು ಸಾಗಿಸುವ ಬಗ್ಗೆ ಗಲಾಟೆ ಮಾಡಿದ್ದಾರೆ. ಇದು ಸ್ಥಳೀಯ ಗ್ರಾಮಸ್ಥರನ್ನು ಕೆರಳಿಸಿದ್ದು, ಎಲ್ಲರೂ ಸೇರಿ ಹಿಂದೂಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮರಕ್ಕೆ ಕಟ್ಟಿ ಹಲ್ಲೆ; ವಿಡಿಯೋ ವೈರಲ್
ಬಳಿಕ ಗ್ರಾಮಸ್ಥರ ಒಂದು ಗುಂಪು ಹಿಂದೂಪರ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಅವಾಚ್ಯಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ. ಕೋಲುಗಳಿಂದ ಹೊಡೆದಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಯಮಕನಮರಡಿ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಶ್ರೀರಾಮ ಸೇನೆ ಪ್ರತಿಭಟನೆ ಎಚ್ಚರಿಕೆ
ಇನ್ನುಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಠ್ಠಲ್ ಗಡ್ಡಿ, 'ಕರ್ನಾಟಕದಲ್ಲಿರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಇದು ಖಾನ್ ಸರ್ಕಾರ. ಪೊಲೀಸರಿಗೆ ದೂರು ಕೊಡಲು ಹೋದರೆ ರೇಪ್ ಮಾಡಿದ್ದೀರಿ ಎಂದು ಧಮಕಿ ಹಾಕಿದ್ದಾರೆ. ಕಾನೂನು ರೀತಿಯಲ್ಲಿ ಥಳಿಸಿದವರಿಗೆ ಶಿಕ್ಷೆಯಾಗಬೇಕು. ಸರಿಯಾಗಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.
Advertisement