
ಕೊಪ್ಪಳ: ತನ್ನ ಪತ್ನಿ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ ಸ್ನೇಹಿತನನ್ನು ಕೊಂದು ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಹೊರವಲಯದಲ್ಲಿ ನಾಗರಾಜ್ ಎಂಬಾತನ ಕೊಲೆಯಾಗಿತ್ತು. ಈ ಕೊಲೆ ಮಾಡಿದ ಬಳಿಕ ಆರೋಪಿ ಹನುಮಂತಪ್ಪ ನಡುರಸ್ತೆಯಲ್ಲಿ ಕೇಕೆ ಹಾಕುತ್ತಾ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಗಂಗಾವತಿ ತಾಲೂಕಿನ ವೀಠಲಾಪುರ ಗ್ರಾಮದ ನಿವಾಸಿಗಳಾದ ನಾಗರಾಜ್ ಹಾಗೂ ಹನುಮಂತಪ್ಪ ಇಬ್ಬರೂ ಅಕ್ಕ-ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಒಂದೇ ತಟ್ಟೆಯಲ್ಲಿ ಊಟ ಮಾಡಿ ಬೆಳೆದಿದ್ದವರ ಮಧ್ಯೆ ಸ್ನೇಹ ಕೂಡ ಅಷ್ಟೇ ಗಾಢವಾಗಿತ್ತು. ಆದರೆ ಕಾಮ ಎಂಬುದು ಅವರ ಸ್ನೇಹಕ್ಕೆ ಹುಳಿ ಹಿಂಡಿತ್ತು. ಏಳು ವರ್ಷಗಳ ಹಿಂದೆ ಹನುಮಂತಪ್ಪ ಮದುವೆಯಾಗಿದ್ದನು.
ದಿನಕಳೆದಂತೆ ಇವರ ಬಾಳಲ್ಲಿ ನಾಗರಾಜನ ಎಂಟ್ರಿಯಾಗಿತ್ತು. ತನ್ನ ಪತ್ನಿಯ ಜೊತೆ ನಾಗರಾಜ್ ಸಲುಗೆಯಿಂದ ಇರುವುದನ್ನು ನೋಡಿದ್ದ ಹನುಮಂತಪ್ಪ ಆಕ್ರೋಶಗೊಂಡಿದ್ದನು. ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಮುಂದುವರೆಸದಂತೆ ಹನುಮಂತಪ್ಪ ನಾಗರಾಗ್ ಗೆ ಹಲವು ಬಾರಿ ಎಚ್ಚರಿಸಿದ್ದನು. ಇದ್ಯಾವುದಕ್ಕೂ ನಾಗರಾಜ್ ಕ್ಯಾರೆ ಅಂದಿರಲಿಲ್ಲ.
ಹೀಗಾಗಿ ನಾಗರಾಜನ ಮೇಲೆ ಹಗೆತನ ಬೆಳೆದಿತ್ತು. ಇಂದು ಬೆಳಗ್ಗೆ ನಾಗರಾಜ್ ಗಂಗಾವತಿಗೆ ಹೋಗುತ್ತಿರುವ ವಿಚಾರ ತಿಳಿದ ಹನುಮಂತಪ್ಪ ತನ್ನ ಸಹೋದರ ಸಿದ್ದರಾಮೇಶ್ ಜೊತೆ ಫಾಲೋ ಮಾಡಿಕೊಂಡು ಬಂದು ಮಧ್ಯದಾರಿಯಲ್ಲಿ ಬೈಕ್ ಗೆ ಅಡ್ಡ ಹಾಕಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಹನುಮಂತಪ್ಪ ಕನಕಗಿರಿ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಸಹಕರಿಸಿದ ಆರೋಪದ ಮೇಲೆ ಸಿದ್ದರಾಮೇಶನನ್ನು ಪೊಲೀಸರು ಬಂಧಿಸಿದ್ದಾರೆ.
Advertisement