
ಬೆಂಗಳೂರು: ತಮ್ಮ ಪ್ರದೇಶದ ರಸ್ತೆಯ ದಯನೀಯ ಸ್ಥಿತಿಯಿಂದ ಬೇಸತ್ತ ಹಾಲಿಡೇ ವಿಲೇಜ್ ರಸ್ತೆಯ ನಿವಾಸಿಗಳು ಭಾನುವಾರ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗಣ ಹೋಮ (ಅಗ್ನಿ ವಿಧಿ) ನಡೆಸಲು ಯೋಜಿಸಿದ್ದರು.
ಪ್ರತಿಭಟನೆಗಳು ಫ್ರೀಡಂ ಪಾರ್ಕ್‌ಗೆ ಸೀಮಿತವಾಗಿರುವುದರಿಂದ ನಿವಾಸಿಗಳು ಈ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ರಾಜಕೀಯ ಕಾರಣದಿಂದ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ನಿರ್ಬಂಧಿಸಲಾಗಿದೆ. ಆದಾಗ್ಯೂ, ಸಣ್ಣ ಪ್ರಮಾಣದಲ್ಲಿ ಪೂಜೆ ನಡೆಸಿದರು.
ಈ ಕುರಿತು TNIE ಜೊತೆಗೆ ಮಾತನಾಡಿದ ನಿವಾಸಿ ಮನೀಶ್ ಶುಕ್ಲಾ, ಭಾನುವಾರ HV ರಸ್ತೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಹೋಮ ಕಾರ್ಯಕ್ರಮ ಇಟ್ಟುಕೊಂಡಿದ್ದೇವು. ಆದರೆ ದೇವಸ್ಥಾನದಲ್ಲಿ ಇದನ್ನು ಮಾಡದಂತೆ ಎರಡು ದಿನಗಳ ಹಿಂದೆ ನಿರ್ದೇಶನ ಬಂದಿರುವುದಾಗಿ ಆರ್ಚಕರು ಹೇಳಿದರು.ಬಹುಶ: ರಾಜಕೀಯ ಒತ್ತಡವೇ ಇದಕ್ಕೆ ಕಾರಣವಾಗಿರಬಹುದು ಎಂದರು.
ಮುಖ್ಯರಸ್ತೆ, ಶಾಲಾ-ಕಾಲೇಜುಗಳು ಮತ್ತು ವಸತಿ ಸಮುದಾಯಗಳಿಗೆ ಸಂಪರ್ಕ ಕಲ್ಪಿಸುವ 2.3-ಕಿಮೀ ಉದ್ದದ ರಸ್ತೆಯನ್ನು ಪೈಪ್‌ಲೈನ್ ಕಾಮಗಾರಿಗಾಗಿ ಹಲವು ಬಾರಿ ಅಗೆಯಲಾಗಿದೆ. ಆದರೆ ಸರಿಪಡಿಸಿಲ್ಲ. ಕಳೆದ ಆರು ತಿಂಗಳ ಹಿಂದೆಯೇ ರಸ್ತೆಗೆ ವೈಟ್‌ಟಾಪಿಂಗ್ ಘೋಷಣೆ ಮಾಡಲಾಗಿದ್ದು, ಅಸಮರ್ಪಕ ಗುತ್ತಿಗೆದಾರರು ಮತ್ತು ಅಸಮರ್ಪಕ ಮೇಲ್ವಿಚಾರಣೆಯಿಂದ ಸ್ವಲ್ಪ ಪ್ರಗತಿ ಕಂಡಿದೆ ಎಂದು ನಿವಾಸಿಗಳು ಹೇಳಿದರು.
ರಸ್ತೆ ಸರಿಪಡಿಸಲು ಪಾಲಿಕೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಚ್‌ವಿ ರಸ್ತೆಯ 15,000 ಕ್ಕೂ ಹೆಚ್ಚು ನಿವಾಸಿಗಳು ಒತ್ತಾಯಿಸಿದ್ದಾರೆ. ಶೀಘ್ರವಾಗಿ ರಸ್ತೆ ಸರಿಪಡಿಸಬೇಕು, ಗುತ್ತಿಗೆದಾರರಿಗೆ ಹೊಣೆ ಹೊರಿಸಬೇಕು ಹಾಗೂ ಸ್ಥಳೀಯವಾಗಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ಮನವಿ ಮಾಡಿದ್ದಾರೆ.
Advertisement