ಬೆಂಗಳೂರು ವಿವಿ-ICSI ನಡುವೆ ಶೈಕ್ಷಣಿಕ ಒಪ್ಪಂದ: 2030 ರ ವೇಳೆಗೆ 30 ಸಾವಿರ ಹೆಚ್ಚುವರಿ ಹುದ್ದೆಗಳ ಸೃಷ್ಟಿ!

ಶೀಘ್ರದಲ್ಲೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಕಾರ ಪ್ರಾರಂಭವಾಗಲಿವೆ ಎಂದು ಐಸಿಎಸ್ಐ ನೂತನ ರಾಷ್ಟ್ರೀಯ ಅಧ್ಯಕ್ಷ ಸಿ.ಎಸ್. ಧನಂಜಯ್ ಶುಕ್ಲಾ ಹೇಳಿದ್ದಾರೆ.
ಬೆಂಗಳೂರು ವಿವಿ-ICSI ನಡುವೆ ಶೈಕ್ಷಣಿಕ ಒಪ್ಪಂದ: 2030 ರ ವೇಳೆಗೆ 30 ಸಾವಿರ ಹೆಚ್ಚುವರಿ ಹುದ್ದೆಗಳ ಸೃಷ್ಟಿ!
Updated on

ಬೆಂಗಳೂರು: ಕೇಂದ್ರ ಸಾಂಸ್ಥಿಕ ವ್ಯವಹಾರಗಳ ವ್ಯಾಪ್ತಿಗೆ ಒಳಪಡುವ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ – ಬೆಂಗಳೂರು ಚಾಪ್ಟರ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಶಿಕ್ಷಣದಲ್ಲಿ ಸಹಭಾಗಿತ್ವ ಹೊಂದಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಶೀಘ್ರದಲ್ಲೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಕಾರ ಪ್ರಾರಂಭವಾಗಲಿವೆ ಎಂದು ಐಸಿಎಸ್ಐ ನೂತನ ರಾಷ್ಟ್ರೀಯ ಅಧ್ಯಕ್ಷ ಸಿ.ಎಸ್. ಧನಂಜಯ್ ಶುಕ್ಲಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬೆಂಗಳೂರು ವಿವಿ ಜೊತೆ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಇಂದು ಕುಲಸಚಿವರಾದ ಶೇಕ್ ಲತೀಫ್, ವಿವಿ ಡೀನ್ ಗಳ ಜೊತೆ ಶೈಕ್ಷಣಿಕವಾಗಿ ಪರಸ್ಪರ ಸಹಕಾರ, ಪಠ್ಯವನ್ನು ಮೇಲ್ದರ್ಜೆಗೇರಿಸುವ, ಕೈಗಾರಿಕಾ ಪಾಲುದಾರಿಕೆ ಹೊಂದುವ ಕುರಿತಂತೆ ವಿಸ್ತೃತ ಫಲಪ್ರದ ಮಾತುಕತೆ ನಡೆಸಲಾಗಿದೆ. ಇದರಿಂದ ಬೆಂಗಳೂರು ವಿವಿ ವ್ಯಾಪ್ತಿಯ 298 ಕಾಲೇಜುಗಳು ಮತ್ತು ಐಸಿಎಸ್ಐಗೆ ಅನುಕೂಲವಾಗಲಿದೆ. ಪಾಲುದಾರಿಕೆಯ ಸ್ವರೂಪದ ಬಗ್ಗೆ ಸಮಾಲೋಚಿಸಿದ್ದು, ಶೈಕ್ಷಣಿಕ ವಲಯದಲ್ಲಿ ಹೊಸ ಆಯಾಮಕ್ಕೆ ಇದೀಗ ವೇದಿಕೆ ಸಜ್ಜಾಗಿದೆ ಎಂದರು.

ಕರ್ನಾಟಕದಲ್ಲಿ ಒಟ್ಟು 12,170 ಮಂದಿ ವಿದ್ಯಾರ್ಥಿಗಳು ಕಂಪೆನಿ ಸೆಕ್ರೇಟರಿ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದ್ದು, ಬೆಂಗಳೂರಿನ ಭಾರತೀಯ ಆಡಳಿತ ಮಂಡಳಿ – ಐಐಎಂ, ಕ್ರೈಸ್ಟ್ ವಿವಿ ಜೊತೆಯೂ ಐಸಿಎಸ್ಐ ಸಹಭಾಗಿತ್ವ ಹೊಂದಿದೆ. ಸಿಎಸ್ಆರ್ ಚಟುವಟಿಕೆಯಡಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಸೈನಿಕರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, 2017 ರಿಂದ ಇದಕ್ಕಾಗಿ 41 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಐಸಿಎಸ್ ಐ ಕೋರ್ಸ್ ಗಳಿಗೆ ವ್ಯಾಪಕ ಬೇಡಿಕೆ ಇದ್ದು, ಬರುವ 2030 ರ ವೇಳೆಗೆ 30 ಸಾವಿರ ಹೆಚ್ಚುವರಿ ಹುದ್ದೆಗಳು ಸೃಜನೆಯಾಗಲಿವೆ. ವಿಜ್ಞಾನ ಒಲಿಂಪಿಯಾಡ್ ಪ್ರತಿಷ್ಠಾನದೊಂದಿಗೆ ಐಸಿಎಸ್ಐ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ ಎಂದು ಸಿ.ಎಸ್. ಧನಂಜಯ್ ಶುಕ್ಲಾ ಹೇಳಿದರು.

ಐಸಿಎಸ್ಐ ಉಪಾಧ್ಯಕ್ಷ ಪವನ್ ಜಿ ಚಂದಕ್ ಮಾತನಾಡಿ, ಕಾರ್ಫೋರೆಟ್ ಜಗತ್ತಿಗೆ ಸಂವಹನ ಕೌಶಲ್ಯ ಅಗತ್ಯವಾಗಿದ್ದು, ಯೋಚಿಸಿ ಮಾತನಾಡುವ ಕುಶಲತೆಯನ್ನು ವೃದ್ಧಿಸಲು “ಸಮಾಜದೊಂದಿಗೆ ಚರ್ಚೆ” ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ. ಸಾಮಾಜಿಕ ಆಡಳಿತ ಲೆಕ್ಕ ಪರಿಶೋಧನೆ, ಇ – ಕಲಿಕೆಯಲ್ಲಿ ಕ್ರಾಂತಿಕಾರ ಕ್ರಮಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರೀಯ ಮಂಡಳಿ ಸದಸ್ಯರಾದ ಸಿ. ದ್ವಾರಕಾನಾಥ್ ಮಾನತಾಡಿ, ಸಿಎಸ್ ಕೋರ್ಸ್ ಗಳನ್ನು ಪೂರ್ಣಗೊಳಿಸಿದವರು 24 ತಿಂಗಳು ಕಠಿಣ ತರಬೇತಿ ಪಡೆಯಬೇಕಾಗುತ್ತದೆ. ಇದರಿಂದ ಪ್ರಾಯೋಗಿಕವಾಗಿ ಕೆಲಸದ ಅನುಭವ ಪಡೆಯಲು ಸಹಕಾರಿಯಾಗಲಿದೆ. ತರಬೇತಿ ಪಡೆಯುವವರಿಗೆ ಗರಿಷ್ಠ 10 ಸಾವಿರ ರೂಪಾಯಿ ಶಿಷ್ಯ ವೇತನ ನೀಡಲಾಗುತ್ತದೆ ಎಂದು ಹೇಳಿದರು.

ಎಸ್ಐಆರ್ ಸಿ ಮಾಜಿ ಅಧ್ಯಕ್ಷ ಪ್ರದೀಪ್ ಬಿ ಕುಲಕರ್ಣಿ, ಐಸಿಎಸ್ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ಸಿ.ಎಸ್. ದೇವಿಕಾ ಸತ್ಯನಾರಾಯಣ್ ಮಾತನಾಡಿ, ಐಸಿಎಸ್ಐ ಜೊತೆ ಬೆಂಗಳೂರು ವಿವಿ ಒಪ್ಪಂದ ಮಾಡಿಕೊಂಡಿರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಜಾಗತಿಕ ಮನ್ನಣೆ ದೊರೆಯಲಿದೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಇದು ಬುನಾದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com