
ಬೆಂಗಳೂರು: ಸಾರ್ವಜನಿಕ ವಾಹನಗಳಿಗೆ ಜಿಪಿಎಸ್-ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನೇ ಬಂಡವಾಳ ಮಾಡಿಕೊಂಡು ಸಾಧನೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದವರಿಗೆ ದರ ನಿಗದಿ ಮಾಡಿ ಸರ್ಕಾರ ಕಡಿವಾಣ ಹಾಕಿದೆ.
ದೆಹಲಿ ನಿರ್ಭಯಾ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಾದ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಶಾಲಾ ಬಸ್‌ಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿತ್ತು. ಇದಕ್ಕೆ ವಾಹನ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರಲ್ಲದೆ, ಸಾಧನಗಳಿಗೆ ದುಬಾರಿ ಬೆಲೆ ವಿಧಿಸುತ್ತಿರುವುದರ ಕುರಿತು ದೂರುಗಳನ್ನು ಹೇಳಿದ್ದರು.
ಈ ಸಾಧನಗಳ ಮಾರುಕಟ್ಟೆ ದರ ಸುಮಾರು 4,000 ರೂ.ಗಳಾಗಿದ್ದರೂ, ಮಾರಾಟಗಾರರು 18,000 ವಿಧಿಸುತ್ತಿದ್ದಾರೆಂದು ದೂರಿದ್ದರು.
ಸಾಲು-ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಿದ ಸಾರಿಗೆ ಇಲಾಖೆ, ಮಾತುಕತೆ ನಡೆಸಿ ಒಂದು VLTD ಸಾಧನದ ಬೆಲೆಯನ್ನು 5,424 ರೂ.ಗಳಿಗೆ, ಪ್ರತಿ ತುರ್ತು ಬಟನ್‌ಗೆ 325 ರೂ.ಗಳಿಗೆ ಮತ್ತು ಒಂದು ವರ್ಷದ ನೆಟ್‌ವರ್ಕ್ ಸಂಪರ್ಕ ಮತ್ತು ನಿರ್ವಹಣಾ ಶುಲ್ಕವನ್ನು 1,800 ರೂ.ಗಳಿಗೆ ನಿಗದಿಪಡಿಸಿದೆ.
ಪ್ಯಾನಿಕ್ ಬಟನ್ ಅಳವಡಿಕೆಗೆ ಕೆಲ ನಿಯಮಗಳಿವೆ. ಈ ಬಟನ್ ಗಳು ವಾಹನಗಳ ಆಸನಗಳ ಸಂಖ್ಯೆಯನ್ನು ಆಧರಿಸಿ ಬದಲಾಗುತ್ತವೆ. ಐದು ಸೀಟುಗಳನ್ನು ಹೊಂದಿರುವ ಕಾರಿನಲ್ಲಿ ಕನಿಷ್ಠ ಮೂರು ಪ್ಯಾನಿಕ್ ಬಟನ್‌ಗಳು ಇರಬೇಕು, 21 ಸೀಟುಗಳನ್ನು ಹೊಂದಿರುವ ಪ್ಯಾಸೆಂಜರ್ ಬಸ್‌ನಲ್ಲಿ ಏಳು ಬಟನ್‌ಗಳು ಇರಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ನಿಗದಿಪಡಿಸಿರುವ ಈ ಬೆಲೆಗಳು ಎಲ್ಲಾ ತೆರಿಗೆಗಳಿಂದ ಪ್ರತ್ಯೇಕವಾಗಿರುತ್ತವೆ. ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸದ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ. ರಾಜ್ಯದಲ್ಲಿರುವ 6 ಲಕ್ಷ ವಾಹನಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಗಳನ್ನು ಅಳವಡಿಸಿವೆ ಎಂದು ತಿಳಿದುಬಂದಿದೆ.
Advertisement