ಬೆಂಗಳೂರು: ವಾಯುಪಡೆ ಸ್ವಾಧೀನದ 444 ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಾಯುಪಡೆಗೆ 1987ರಲ್ಲಿ 570 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಪೈಕಿ ಅರಣ್ಯ ಎಂದು ಅಧಿಸೂಚನೆ ಆಗಿರುವ 452 ಎಕರೆ ಮಂಜೂರಾತಿ ರದ್ದುಪಡಿಸಿ, 2017ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
Eshwar Khandre
ಈಶ್ವರ್ ಖಂಡ್ರೆ
Updated on

ಬೆಂಗಳೂರು: ನಗರದ ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ಪ್ರಸ್ತುತ ಭಾರತೀಯ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ನಿಯಮಾನುಸಾರ ಮರು ವಶಕ್ಕೆ ಪಡೆಯುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಾಯುಪಡೆಗೆ 1987ರಲ್ಲಿ 570 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಪೈಕಿ ಅರಣ್ಯ ಎಂದು ಅಧಿಸೂಚನೆ ಆಗಿರುವ 452 ಎಕರೆ ಮಂಜೂರಾತಿ ರದ್ದುಪಡಿಸಿ, 2017ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ.

ಆದರೂ ಭಾರತೀಯ ವಾಯು ಪಡೆ ಮಾ. 1ರಂದು ಎಫ್.ಸಿ. (ಅರಣ್ಯ ತೀರುವಳಿ) ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿತ್ತು ಎಂದು ಅರಣ್ಯ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2017ರ ಸರ್ಕಾರದ ಆದೇಶದನ್ವಯ ಮ್ಯುಟೇಷನ್ ಆಗಿದ್ದು, ಪ್ರಸ್ತುತ ಈ ಜಮೀನಿನ ಪಹಣಿಯಲ್ಲಿ ಮೀಸಲು ಅರಣ್ಯ ಎಂದು ನಮೂದಾಗಿದೆ. ಅರಣ್ಯ ಇಲಾಖೆ ಈ ವಿಷಯವನ್ನು ವಾಯುಪಡೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸದರಿ ಜಮೀನು, ಮೀಸಲು ಅರಣ್ಯ ಎಂಬ ಫಲಕವನ್ನೂ ಹಾಕಿದೆ. ಈ ಅರಣ್ಯ ಭೂಮಿ ತೆರವು ಮಾಡುವಂತೆ ರಕ್ಷಣಾ ಸಚಿವಾಲಯಕ್ಕೆ ಪತ್ರವನ್ನೂ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಪೂರ್ಣ ಮಾಹಿತಿ ಇದ್ದರೂ ವಾಯುಪಡೆ ನಿಯಮ ಮೀರಿ, ಅಕ್ರಮವಾಗಿ ನಿರ್ಮಾಣ ಕಾಮಗಾರಿ ನಡೆಸುತ್ತಿತ್ತು. ಪ್ರಸ್ತುತ ಕಾಮಗಾರಿ ನಿಲ್ಲಿಸಲಾಗಿದೆ. ಪ್ರಸ್ತುತ 444 ಎಕರೆ ಜಮೀನಿನ ಪೈಕಿ ಸುಮಾರು 15 ಎಕರೆ ಪ್ರದೇಶದಲ್ಲಿ ವಾಯುಪಡೆ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡು ತರಬೇತಿ ನೀಡುತ್ತಿದೆ. ಸ್ವಲ್ಪ ಜಮೀನಿನಲ್ಲಿ ವಾಯುಪಡೆಯ ಕಚೇರಿ ಇತ್ಯಾದಿ ನಿರ್ಮಿಸಿದೆ. ಉಳಿದ ಭೂಮಿ ಅರಣ್ಯ ಸ್ವರೂಪದಲ್ಲೇ ಇದ್ದು, ಮರ, ಗಿಡಗಳಿಂದ ಸಮೃದ್ಧವಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

Eshwar Khandre
ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸ್ಥಳೀಯ ಅಧಿಕಾರಿಗಳು ಅನುಮತಿ ನೀಡಬಾರದು: ಈಶ್ವರ್ ಖಂಡ್ರೆ ಖಡಕ್ ಸೂಚನೆ!

ಕೂಡಲೇ ಅರಣ್ಯ ಜಮೀನನ್ನು ವಶಕ್ಕೆ ಪಡೆಯಲು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮತ್ತು ವಾಯುಪಡೆ ಬಳಕೆ ಮಾಡುತ್ತಿರುವ ಜಮೀನಿಗೆ ಸಂಬಂಧಿಸಿದಂತೆ ಪರ್ವೇಶ್ ಪೋರ್ಟಲ್ ನಲ್ಲಿ ನಿಯಮಾನುಸಾರ ಅರ್ಜಿ ಹಾಕಿ ಎಫ್.ಸಿ. ಪಡೆಯಲು ವಾಯುಪಡೆಗೆ ಪತ್ರ ಬರೆಯಲು ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com