
ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಮಾರ್ಚ್ 9ರಂದು ಆಯೋಜಿಸಲಾಗಿರುವ ಪೊಲೀಸ್ ಓಟ(KSP RUN)ದಲ್ಲಿ ಪೊಲೀಸ್ ಸಿಬ್ಬಂದಿ, ಸೈನಿಕರು, ಕ್ರೀಡಾಪಟುಗಳು ಸೇರಿದಂತೆ 10,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷವಾಕ್ಯದಡಿ ನಡೆಯಲಾಗುತ್ತಿರುವ ಓಟದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ, ಸೈಬರ್ ಅಪರಾಧ, ಹಸಿರು ಬೆಂಗಳೂರು ಕುರಿತು ಅರಿವು ಮೂಡಿಸಲಾಗುತ್ತಿದೆ. ಅಂದು ಬೆಳಗ್ಗೆ 6-30ಕ್ಕೆ 10 ಕಿ. ಮೀ ಓಟ ಹಾಗೂ 7-30 ಕ್ಕೆ 5 ಕಿ. ಮೀ ಓಟ ಆರಂಭವಾಗಲಿದೆ.
ಬೆಂಗಳೂರಿನಲ್ಲಿ ಎರಡೂ ಓಟಗಳು ವಿಧಾನಸೌಧದಿಂದ ಆರಂಭವಾಗಿ, ಕಬ್ಬನ್ ಪಾರ್ಕ್ ನಲ್ಲಿ ಸಂಚರಿಸಲಿವೆ. ರಾಜ್ಯದ ಜಿಲ್ಲಾ ಕೇಂದ್ರಗಳಿಗೂ ಓಟ ನಡೆಯಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ಶುಕ್ರವಾರ ತಿಳಿಸಲಾಗಿದೆ.
ಓಟದ ಆರಂಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್ ಪ್ರದರ್ಶನ ನೀಡಲಿದೆ. ಪದಾತಿ ದಳದ ಕುದುರೆಗಳು ಸಹ ಮಾರ್ಗದಲ್ಲಿ ಸಾಗಲಿವೆ. ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಓಟಕ್ಕೆ ಚಾಲನೆ ನೀಡಲಿದ್ದಾರೆ. ಎಸ್‌ಬಿಐ-ಬೆಂಗಳೂರು ಯೂನಿಟ್ ನ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ, ಡಿಜಿಪಿ ಅಲೋಕ್ ಮೋಹನ್ ಅವರು ಉಪಸ್ಥಿತರಿರುವರು.
ಓಟದಲ್ಲಿ ಪಾಲ್ಗೊಳ್ಳುವವರು ಮಾರ್ಚ್ 7 ಮತ್ತು ಮಾರ್ಚ್ 8 ರಂದು ಗರುಡಾ ಮಾಲ್ ಎದುರು ಇರುವ ಸುಲ್ಲಿವಾನ್ ಹಾಕಿ ಮೈದಾನದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಟಿ- ಶರ್ಟ್ ಸಂಗ್ರಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Advertisement