ರಾಜ್ಯ ಬಜೆಟ್ 2025: ರೇಣುಕಾ ಯಲ್ಲಮ್ಮ ಕ್ಷೇತ್ರ ವಿಶೇಷ ಅನುದಾನ ಅಡಿಯಲ್ಲಿ ಅಭಿವೃದ್ಧಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂ

ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು 2025-26ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
Heritage site Lakkundi of Gadag district
ಗದಗ ಜಿಲ್ಲೆಯ ಪಾರಂಪರಿಕ ಲಕ್ಕುಂಡಿ ತಾಣ
Updated on

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ.

ಇಂದು ವಿಧಾನಸಭೆಯಲ್ಲಿ 16ನೇ ಬಾರಿ 2025-26ನೇ ಸಾಲಿನ ಬಜೆಟ್ (2025-26 Budget) ಮಂಡಿಸಿದ ಅವರು, ಮೊದಲಿಗೆ ನಮ್ಮ ಸಂಕಲ್ಪಗಳನ್ನು ಜನರ ಮುಂದಿಡುವ ದೊಡ್ಡ ಹೊಣೆಗಾರಿಕೆ ಮುಂದೆ ನಿಂತಿದ್ದೇನೆ. ನಾಳೆಗಳ ಬಗ್ಗೆ ಭರವಸೆ ಮೂಡಿಸುವ, ನಮ್ಮ ವಾಗ್ದಾನಗಳಲ್ಲಿ ಬಜೆಟ್​ ಮಂಡಿಸುತ್ತಿದ್ದೇನೆ. ಬುದ್ಧ, ಬಸವ, ನಾರಾಯಣಗುರು ಅವರ ಆಶಯಗಳಿವೆ. ಕುವೆಂಪು ಅವರ ಕವನ ಹೇಳುವ ಮೂಲಕ ಕುಳಿತುಕೊಂಡು ಬಜೆಟ್​ ಮಂಡಿಸಲು ಶುರು ಮಾಡಿದರು. ಬಳಿಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಅನುದಾನ ಘೋಷಿಸಿದರು.

  • ರಾಜ್ಯದಲ್ಲಿ ಪ್ರವಾಸೋದ್ಯಮ ವಲಯದ ವಿಪುಲ ಅವಕಾಶ ಮತ್ತು ಸಾಮರ್ಥ್ಯದ ಸದ್ಬಳಕೆ ಮಾಡಿಕೊಳ್ಳಲು ನೂತನ ಪ್ರವಾಸೋದ್ಯಮ ನೀತಿ 2024-29 ನ್ನು ಜಾರಿಗೊಳಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಆಶಾದಾಯಕ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಆದ್ಯತೆಯ ವಲಯವಾಗಿಸುವ ಉದ್ದೇಶ ಹೊಂದಿರುವ ಈ ನೀತಿಯಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆಯ ನಿರೀಕ್ಷೆ ಹಾಗೂ 1.5 ಲಕ್ಷ ಉದ್ಯೋಗ ಸೃಜನೆಯ ಗುರಿ ಹೊಂದಿದ್ದೇವೆ.

  • ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅನ್ನು ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

  • ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು 2025-26ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.

  • ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು (Highway Hubs) ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು.

  • UNESCO ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ಬೇಲೂರು-ಹಳೇಬೀಡು-ಸೋಮನಾಥಪುರ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.

  • ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ತಾಣಗಳಲ್ಲಿಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರಿಗೆ ತರಬೇತಿ ನೀಡಿ ಅವರ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸಲಾಗುವುದು ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು 24X7 ಪ್ರವಾಸಿ ಸಹಾಯವಾಣಿ ತೆರೆಯಲಾಗುವುದು.

  • ರಾಜ್ಯದ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಸೃಷ್ಟಿಸಲು 25 ಸ್ಮಾರಕಗಳನ್ನು ದತ್ತು ನೀಡಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಸ್ಮಾರಕಗಳನ್ನು 'ನಮ್ಮ ಸ್ಮಾರಕ' ಡಿಜಿಟಲ್ ವೇದಿಕೆಯ ಮುಖಾಂತರ ದತ್ತು ನೀಡಲು ಉದ್ದೇಶಿಸಲಾಗಿದೆ.

  • ರಾಜ್ಯದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ONE-TAC Digital Grid ಅನ್ನು ಉಪಯೋಗಿಸಲಾಗುವುದು.

  • ಐತಿಹಾಸಿಕ ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಹಾಗೂ ಪ್ರಾಚ್ಯಾವಶೇಷಗಳ ಸಂರಕ್ಷಣೆಗಾಗಿ ಬಯಲು ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲಾಗುವುದು.

  • ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಗಳನ್ನು ಬಿಂಬಿಸುವ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯವನ್ನು ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗುವುದು.

Heritage site Lakkundi of Gadag district
2025-26ನೇ ಸಾಲಿನ ರಾಜ್ಯ ಬಜೆಟ್: ದಾಖಲೆಯ 16ನೇ ಬಾರಿಗೆ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com