
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ಬಜೆಟ್ ದಕ್ಷಿಣ ಕನ್ನಡ ಜನತೆಗೆ ನಿರಾಸೆ ಮೂಡಿಸಿದೆ.
ವಿಧಾನಸಭೆಯಲ್ಲಿ ನಿನ್ನೆ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿಗಳು, ಮಂಗಳೂರಿನಲ್ಲಿ ಹಡಗು ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಅಂತರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ನದಿ ಕ್ರೂಸ್ ಯೋಜನೆಗಳ ಜಾರಿ, ಕಡಲ್ಕೊರೆತ ತಡೆಯಲು ಶೋರ್ ಲೈನ್ ಮ್ಯಾನೇಜ್ ಮೆಂಟ್, ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಪುತ್ತೂರು ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದಾಗಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ಸಂಪರ್ಕ ರಸ್ತೆಗಳನ್ನು ನಬಾರ್ಡ್ ನೆರವಿನೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿದರು. ಆದರೆ, ಹಣವನ್ನು ಹಂಚಿಕೆ ಮಾಡಲಿಲ್ಲ ಇದು ಕರಾವಳಿ ಭಾಗದ ಜನರಿಗೆ ಬೇಸರ ತರಿಸಿದೆ.
ಬಜೆಟ್'ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ ಘೋಷಣೆ ಮಾಡಿದ್ದು, ಇದರಿಂದ ಕರಾವಳಿ ಹಾಗೂ ಇತರ ಪ್ರದೇಶದ ಮೀನುಗಾರರಿಗೂ ಅನುಕೂಲವಾಗಲಿದೆ.
ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲ ದ್ವಿಗುಣಗೊಳಿಸಿದ್ದರಿಂದ ರಾಜ್ಯದ ಹೆಚ್ಚು ವಿದ್ಯಾರ್ಥಿಗಳು ಮೀನುಗಾರಿಕೆ ವಿಷಯದಲ್ಲಿಪದವಿ ಮಾಡಲು ಸಾಧ್ಯವಾಗಲಿದೆ. ರಾಜ್ಯದ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಪಡಿಸಲು 30 ಕೋಟಿ ರೂ. ಮೀಸಲಿಟ್ಟಿದ್ದು, ಇದರಿಂದ ಸಂಪರ್ಕ ಸುಧಾರಣೆಯಾಗಲಿದೆ.
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ ಮೂರು ಲಕ್ಷ ರೂ. ಆರ್ಥಿಕ ನೆರವು ಘೋಷಣೆ ಮಾಡಲಾಗಿದೆ. ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವ ಮೀರಿರುವ ಹಳೆಯ ಎಂಜಿನ್‌ಗಳನ್ನು ಬದಲಾಯಿಸಿ, ಹೊಸ ಎಂಜಿನ್ ಖರೀದಿಸಲು ಶೇ.50ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ ನೀಡಲಾಗಿದೆ.
ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ ಮತ್ತು ಅನುಭವ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿ ಸಡಿಲಿಸಲು ಕ್ರಮ. ಕರಾವಳಿ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಭೂಕುಸಿತ ತಡೆ ಯೋಜನೆ, ಕಾರವಾರ ನೌಕಾ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ವರ್ಷದಲ್ಲಿ ಅಗತ್ಯ ಹಂಚಿಕೆಯನ್ನು ಒದಗಿಸಲಾಗುವುದು. ಈ ಕುರಿತ ಕೆಲಸಗಳನ್ನು ಪ್ರಾರಂಭಿಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳ ಅಭಿವೃದ್ಧಿಗೆ ಒಟ್ಟು 6 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
Advertisement