
ಬೆಂಗಳೂರು: ಡಿಐಜಿ ವರ್ತಿಕಾ ಕಟಿಯಾರ್ ವಿರುದ್ಧ ಐಜಿಪಿ ರೂಪಾ ಅವರು ಆರೋಪ ಸಂಪೂರ್ಣ ಆಧಾರ ರಹಿತವಾಗಿದ್ದು, ಆರೋಪ ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಮೂಲಗಳು ತಿಳಿಸಿವೆ.
ಈ ಹಿಂದೆ ‘ರೂಪಾ ಅವರು ಕೆಳಹಂತದ ಸಿಬ್ಬಂದಿ ಬಳಸಿಕೊಂಡು ತಮ್ಮ ಕೊಠಡಿಯನ್ನು ಅನಧಿಕೃತವಾಗಿ ಪ್ರವೇಶಿಸಿ, ಕೆಲವು ದಾಖಲೆಗಳನ್ನು ಇರಿಸಿದ್ದಾರೆ’ ಎಂದು ಆರೋಪಿಸಿ ವರ್ತಿಕಾ ಅವರು ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದರು.
ಇದರ ಬೆನ್ನಲ್ಲೇ ವರ್ತಿಕಾ ಅವರ ವಿರುದ್ಧವೂ ರೂಪಾ ಅವರು ಪ್ರತಿ ದೂರು ನೀಡಿದ್ದರು. ಕೆಲವು ಕಾನ್‌ಸ್ಟೆಬಲ್‌ಗಳು ತಮ್ಮ ಕೊಠಡಿಯಲ್ಲಿ ಕೆಲವು ಫೈಲ್‌ಗಳನ್ನು ಇರಿಸಿ ಫೋಟೋ ತೆಗೆದುಕೊಂಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ಅವರು ಯಾವುದೇ ಪುರಾವೆಗಳಿಲ್ಲದೆ ಆರೋಪ ಮಾಡಿದ್ದಾರೆ. ವರ್ತಿಕಾ ಅವರ ಕೊಠಡಿ ಮತ್ತು ನನ್ನ ಕೊಠಡಿಯ ಮುಂದೆ, ಕಾರಿಡಾರ್‌ನಲ್ಲಿ ಕನಿಷ್ಠ 5 ಸಿಸಿಟಿವಿ ಕ್ಯಾಮರಾಗಳಿವೆ. ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನೂ ಅವರು ನೀಡಿಲ್ಲ. ಮತ್ತು ಅಂಥಹ ಯಾವುದೇ ಘಟನೆ ಸಂಭವಿಸಿದೆ ಎಂದು ಅವರು ಭಾವಿಸಿದ್ದರೆ, ಅದನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ?. ನಾನು ಕೆಲವು ಫೈಲ್‌ಗಳನ್ನು ಇಟ್ಟುಕೊಂಡಿರುವುದಾಗಿ ವರ್ತಿಕಾ ಕಟಿಯಾರ್ ಆರೋಪಿಸುತ್ತಿದ್ದಾರೆ. ಹಾಗಿದ್ದರೆ ಅವರು ನಿಷ್ಪಕ್ಷಪಾತವಾಗಿ ಇಲಾಖಾ ಮುಖ್ಯಸ್ಥರಿಗೆ ಬರೆಯಬಹುದಿತ್ತು. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೇರವಾಗಿ ಪತ್ರ ಬರೆದಿದ್ದಾರೆ.
ನನ್ನ ಖ್ಯಾತಿಗೆ ಕಳಂಕ ತರುವ ಮತ್ತು ನನಗೆ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ವರ್ತಿಕಾ ಕಟಿಯಾರ್ ಅವರು ಈ ರೀತಿಯ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆಯು ಶ್ರೇಣೀಕೃತ ಹಾಗೂ ಶಿಸ್ತುಬದ್ಧವಾಗಿದ್ದು, ಹಿರಿಯ ಅಧಿಕಾರಿಗಳನ್ನು ಬೈ-ಪಾಸ್ ಮಾಡುವ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೇರವಾಗಿ ಪತ್ರ ಬರೆಯುವ ಕ್ರಮಗಳು ಅವಿಧೇಯತೆಗೆ ಸಮಾನವಾಗಿರುತ್ತವೆ ಎಂದು ಹೇಳಿದ್ದರು.
ಅಲ್ಲದೆ, ವರ್ತಿಕಾ ಕಟಿಯಾರ್ ಅವರ ವಿರುದ್ಧ ಈ ಹಿಂದಿನ ಕೆಲವು ನಿದರ್ಶನಗಳನ್ನು ಉಲ್ಲೇಖಿಸಿದ್ದ ಡಿ. ರೂಪಾ ಅವರು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದ್ದರು.
ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 2010 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದ ವರ್ತಿಕಾ ಅವರು, ಕರ್ನಾಟಕ ಕೇಡರ್‌ನ ಸಹಾಯಕ ನಿರ್ದೇಶಕ ವಿಪುಲ್ ಕುಮಾರ್ (ಐಪಿಎಸ್) ವಿರುದ್ಧ ಕಿರುಕುಳ ದೂರು ದಾಖಲಿಸಿದ್ದರು ಹೇಳಿದ್ದರು.
ಈ ಆರೋಪ ಕುರಿತು ಪೊಲೀಸ್ ಇಲಾಖೆಯೊಳಗಿನ ವಿಶ್ವಾಸಾರ್ಹ ಮೂಲಗಳು ಮಾಹಿತಿ ನೀಡಿದ್ದು, ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಇದನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದೆ.
ಡಿಐಜಿ ವರ್ತಿಕಾ ಕಟಿಯಾರ್ ಮತ್ತು ಐಜಿಪಿ ವಿಪುಲ್ ಕುಮಾರ್ 2023-24ರಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ ವೃತ್ತಿಪರವಾಗಿ ಒಟ್ಟಿಗೆ ಕೆಲಸ ಮಾಡಿದ್ದು, ಈ ಸಮಯದಲ್ಲಿ ಇಬ್ಬರೂ ಸಹೋದ್ಯೋಗಿ ವೃತ್ತಿಪರ ಸಂಬಂಧವನ್ನು ಉಳಿಸಿಕೊಂಡಿದ್ದಾರೆಂದು ತಿಳಿಸಿದೆ.
Advertisement