
ಬೆಂಗಳೂರು: ವೈಯಕ್ತಿಕ ಮತ್ತು ವೃತ್ತಿಪರ ಕರ್ತವ್ಯಗಳನ್ನು ಸಮತೋಲನಗೊಳಿಸುತ್ತಾ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಜವಾಬ್ದಾರಿಗಳನ್ನು ಹೊರುತ್ತಾರೆ. ಮಹಿಳೆಯರು ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶನಿವಾರ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಒಟ್ಟು 20 ಮಹಿಳಾ ಸಾಧಕಿಯರು ಮತ್ತು ಆರು ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಹಿಳೆಯರು ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಮನೆಯಲ್ಲಿ ಮತ್ತು ಹೊರಗೆ ಬಹು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಯಶಸ್ಸಿನ ಹಿಂದೆ ಪರಿಶ್ರಮದ ಕಥೆಯನ್ನು ಹೊಂದಿರುತ್ತಾಳೆಂದು ಹೇಳಿದರು.
ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಸ್ಫೂರ್ತಿಯಾಗಿ ಉಲ್ಲೇಖಿಸಿದ ಅವರು, ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಇಂದಿರಾ ಗಾಂಧಿಯವರು ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗೆ ಹೇಗೆ ಮುಡಿಪಾಗಿಟ್ಟರು ಎಂಬುದನ್ನು ತಿಳಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಧೈರ್ಯದ ಸಂಕೇತವೆಂದು ಶ್ಲಾಘಿಸಿದರು.
Advertisement