
ಬೆಂಗಳೂರು: ಕಳೆದ ವಾರ ದುಬೈನಿಂದ ಅಕ್ರಮವಾಗಿ 14. 56 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಅವರ ಕೆನ್ನೆ ಊದಿಕೊಂಡಿದ್ದು, ಅವರ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆಯೇ ಎಂಬಂತಹ ಅನುಮಾನಗಳು ಹುಟ್ಟಿಕೊಂಡಿತ್ತು.
ಈ ಕುರಿತ ಪ್ರಶ್ನೆಗೆ ಇಂದು ಬೆಂಗಳೂರು ವಿಶೇಷ ನ್ಯಾಯಾಲಯದ ಮುಂದೆ ಕಣ್ಣೀರಿಟ್ಟ ರನ್ಯಾ ರಾವ್, ತಾನು ಬೈಗುಳದ ಕಿರುಕುಳದಿಂದ ಅಘಾತಗೊಂಡಿರುವುದಾಗಿ ಹೇಳಿಕೆ ನೀಡಿರುವುದಾಗಿ NDTV ವರದಿ ಮಾಡಿದೆ.
ಹೌದು. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಕಸ್ಟಡಿಯಲ್ಲಿದ್ದಾಗ ತನಗೆ ಬೈಗುಳದ ಕಿರುಕುಳ ನೀಡುವ ಮೂಲಕ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಆಘಾತಕ್ಕೊಳಗಾಗಿದ್ದು, ತೀವ್ರವಾಗಿ ನೊಂದಿರುವುದಾಗಿ ತಿಳಿಸಿದರು.
ದುಬೈನಿಂದ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು.
ಡಿಜಿಪಿ ಡಾ.ಕೆ.ರಾಮಚಂದ್ರರಾವ್ ಅವರ ಮಲಮಗಳಾದ ರನ್ಯಾ ಅವರನ್ನು ಆರ್ಥಿಕ ಅಪರಾಧಕ್ಕಾಗಿ ಮಾರ್ಚ್ 4 ರಂದು ಸಂಜೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರಿಗೆ ಇಲ್ಲಿವರೆಗೂ ನ್ಯಾಯಾಂಗ ಬಂಧನ ವಿಧಿಸಿತ್ತು.
ಡಿಆರ್ ಐ ಕಸ್ಟಡಿ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯ ನಟಿ ರನ್ಯಾ ರಾವ್ ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಹೀಗಾಗಿ ನಟಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
Advertisement