
ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಸಿಬಿಐನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಶೂನ್ಯ ವೇಳೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್, ಚಿನ್ನದ ಕಳ್ಳಸಾಗಣೆ ಪ್ರಕರಣ ಮತ್ತು ಕರ್ನಾಟಕದ ಇಬ್ಬರು ಮಂತ್ರಿಗಳ ಭಾಗಿಯಾಗಿರುವ ಆರೋಪದ ವರದಿ ಬಗ್ಗೆ ಪ್ರಶ್ನಿಸಿದ್ದು ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಈ ಪ್ರಕರಣವನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಆಡಳಿತವೂ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ಆದರೆ, ಯಾವುದೇ ಚಿನ್ನದ ಕಳ್ಳಸಾಗಣೆ ನಡೆದಿಲ್ಲ ಎಂದು ನಾವು ಹೇಳುತ್ತಿಲ್ಲ ಎಂದು ಪರಮೇಶ್ವರ ಹೇಳಿದರು.
ರಾಜ್ಯ ಸರ್ಕಾರಕ್ಕೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಡಿಆರ್‌ಐ ಅಥವಾ ಸಿಬಿಐನಿಂದ ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ಮಾಧ್ಯಮ ವರದಿಗಳ ಪ್ರಕಾರ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರದ ಅನುಮತಿಯನ್ನು ಕಾರ್ಯವಿಧಾನವಾಗಿ ಪಡೆಯಲಾಗುತ್ತದೆ. ಅದನ್ನು ಸಹ (ಈ ಪ್ರಕರಣದಲ್ಲಿ) ಮಾಡಲಾಗಿಲ್ಲ. ಆದ್ದರಿಂದ, ಮಾಧ್ಯಮಗಳ ಮೂಲಕ ನಿಮಗೆ ತಿಳಿದಿರುವಷ್ಟೇ ನಮಗೂ ತಿಳಿದಿದೆ ಎಂದು ಹೇಳಿದರು.
ನಟಿಯ ಮಲತಂದೆ ಡಿಜಿಪಿ ದರ್ಜೆಯ ಅಧಿಕಾರಿಯಾಗಿದ್ದು, ನಟಿಗೆ ಪೊಲೀಸರು ಸಹಾಯ ಮಾಡಿದ್ದಾರೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಇದು ತನಿಖೆಯ ವಿಷಯವಾಗಿದೆ ಮತ್ತು ಸಿಬಿಐ ಪ್ರಕರಣವನ್ನು ತನಿಖೆ ಮಾಡುತ್ತಿದೆ. ಇಬ್ಬರು ಮಂತ್ರಿಗಳು ಭಾಗಿಯಾಗಿರುವ ಆರೋಪದ ಬಗ್ಗೆ ವರದಿಗಳ ಬಗ್ಗೆ, ಅದನ್ನೂ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದರು.
ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಹಿರಿಯ ಪೊಲೀಸ್ ಅಧಿಕಾರಿಯ ಮಗಳಿಗೆ ಶಿಷ್ಟಾಚಾರ ವಿಸ್ತರಿಸಿ ಪೊಲೀಸ್ ಜೀಪ್ ಒದಗಿಸಿದ ಪೊಲೀಸರ ಬಗ್ಗೆ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಬೇಕು. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೂ ತಿಳಿದಿಲ್ಲ ಎಂಬ ರಾಜ್ಯ ಸರ್ಕಾರದ ಹೇಳಿಕೆ ಸರಿಯಲ್ಲ. ಸರ್ಕಾರ ಯಾರನ್ನಾದರೂ ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪರಮೇಶ್ವರ್, ರಾಜ್ಯ ಸರ್ಕಾರದ ಮಟ್ಟದಲ್ಲಿ ಯಾವುದೇ ತನಿಖೆ ನಡೆಸಬೇಕಾದರೂ, ಪೊಲೀಸ್ ಇಲಾಖೆಯೊಳಗೆ ನಡೆದಿದೆ ಎನ್ನಲಾದ ವಿಷಯಗಳ ಕುರಿತು ಖಂಡಿತವಾಗಿಯೂ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
34 ವರ್ಷದ ನಟಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಚ್ 3 ರಂದು ಆಗಮಿಸಿದ್ದರು. ಡಿಆರ್‌ಐ ತಪಾಸಣೆ ವೇಳೆ ನಟಿಯಿಂದ 12.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಯಿತು. ಮರುದಿನ, ಬೆಂಗಳೂರಿನಲ್ಲಿರುವ ಅವರ ನಿವಾಸದಿಂದ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ರೂ. ನಗದು ವಶಪಡಿಸಿಕೊಂಡಿರುವುದಾಗಿ ಡಿಆರ್‌ಐ ತಿಳಿಸಿದೆ. ರನ್ಯಾ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ. ರಾಮಚಂದ್ರ ರಾವ್ ಅವರ ಮಲಮಗಳಾಗಿದ್ದಾಳೆ.
Advertisement