ವಿಪಕ್ಷದರಿಗೆ ಸಿಗುವ ಮಾನ್ಯತೆ ಸ್ವಪಕ್ಷೀಯರಿಗೆ ಸಿಗುತ್ತಿಲ್ಲ: CLP ಸಭೆಯಲ್ಲಿ ಸಚಿವರ ವಿರುದ್ಧ ಸಿಡಿದೆದ್ದ ಶಾಸಕರು; ಅನುದಾನ ಬಿಡುಗಡೆ ಭರವಸೆ ನೀಡಿ ತಣ್ಣಗಾಗಿಸಿದ ಸಿಎಂ

ಸರ್ಕಾರ ರಚನೆಯಾಗಿ ಎರಡು ವರ್ಷಗಳು ಕಳೆಯುತ್ತಿವೆ. ಆದರೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ. ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ಸಚಿವರು ತಪ್ಪಿಸಿಕೊಳ್ಳುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
Updated on

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು, ಸಚಿವರ ವಿರುದ್ಧ ಸ್ವಪಕ್ಷದ ಶಾಸಕರೇ ಸಿಡಿದೆದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ.

ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಎದುರಿನಲ್ಲೇ ಸಚಿವರ ವಿರುದ್ಧ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ ರಚನೆಯಾಗಿ ಎರಡು ವರ್ಷಗಳು ಕಳೆಯುತ್ತಿವೆ. ಆದರೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ. ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ಸಚಿವರು ತಪ್ಪಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಕೆಲಸಗಳ ನಿಮಿತ್ತ ಸಂಪರ್ಕಕ್ಕೆ ಯತ್ನಿಸಿದರೂ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕಿದರೂ ಕೆಲಸಗಳನ್ನ ಮಾಡಿಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲಸಲ್ಲದ‌ ಕಾರಣಗಳನ್ನ ಹೇಳಿ ನಮ್ಮನ್ನ ಸಾಗ ಹಾಕಲು ನೋಡುತ್ತಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಪ್ರತಿಪಕ್ಷದ ಶಾಸಕರು ಹೇಳಿದವರಿಗೆ ಎಲ್‌ಒಸಿ ಬಿಡುಗಡೆಯಾಗುತ್ತಿದೆ. ಆಡಳಿತ ಪಕ್ಷದ ಶಾಸಕರ ಕಡೆಯವರಿಗೆ ಅವಕಾಶ ಸಿಗುತ್ತಿಲ್ಲ. ಇದು ಹೀಗೆ ಆದರೆ ಸಚಿವರಾಗಿ ಯಾಕೆ ಇರಬೇಕು. ಸ್ಪಂದಿಸದ ಸಚಿವರನ್ನ ಮುಂದುವರೆಸುವ ಅಗತ್ಯ ಏನಿದೆ. ತಮ್ಮ ನಡೆ ಬದಲಿಸಿಕೊಳ್ಳದ‌ ಸಚಿವರನ್ನ ಸಂಪುಟದಿಂದ ಕೈಬಿಡಿ ಎಂದು ಒತ್ತಾಯಿಸಿದರು,

ಇದೇ ವೇಳೆ ಉಪ ನೋಂದಣಾಧಿಕಾರಿ ಮತ್ತು ಪಿಡಿಒಗಳನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುತ್ತಿರುವುದಕ್ಕೂ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಉಪನೋಂದಣಾಧಿಕಾರಿ ಹಾಗೂ ಪಿಡಿಒಗಳ ವರ್ಗಾವಣೆಯನ್ನ ಕೌನ್ಸಿಲಿಂಗ್ ಮೂಲಕ ಆರಂಭಿಸಲಾಗಿದೆ. ಇದರಿಂದ ಬೇಕಾದವರನ್ನ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತಿಲ್ಲ. ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಆಗುವವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
ಮುಂದಿನ ವರ್ಷವೂ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಕಸರತ್ತು?: ಹೈ ಕಮಾಂಡ್ ಹಾಗೂ ಸಮುದಾಯ ಓಲೈಕೆಗಾಗಿ ಹಲವು ಯೋಜನೆ!

ಈ ವೇಳೆ ಶಾಸಕರನ್ನ ಸಿಎಂ ಸಮಾಧಾನಪಡಿಸಿದ ಸಿದ್ದರಾಮಯ್ಯ ಅವರು, ಈ ಬಾರಿ ಬಜೆಟ್‌ನಲ್ಲಿ 8,500 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಎಲ್ಲರಿಗೂ ಸೂಕ್ತ ರೀತಿಯಲ್ಲಿ ಹಂಚಿಕೆ ಮಾಡಲಾಗುವುದೆಂದು ಭರವಸೆ ನೀಡಿದರು.

ಅಧಿವೇಶನ ಮುಗಿಯುತ್ತಿದ್ದಂತೆ ಸಚಿವರೆಲ್ಲರೂ ರಾಜ್ಯ ಪ್ರವಾಸ ಮಾಡಬೇಕು ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಕಾರ್ಯಕರ್ತರ ಅಹವಾಲು ಆಲಿಸಿ ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ಕೊಡಬೇಕೆಂದು ಸೂಚಿಸಿದರು.

ಅಧಿವೇಶನದಲ್ಲಿ ಮುಸ್ಲಿಂ ಬಜೆಟ್‌ ಎಂದು ಬಿಜೆಪಿ, ಜೆಡಿಎಸ್‌ನವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯಡಿ ಪರಿಶಿಷ್ಟರ ಕಲ್ಯಾಣಕ್ಕೆ ಮಾತ್ರ ಅನುದಾನ ನೀಡಲಾಗಿದೆ ಎಂಬ ಆರೋಪವೂ ಸರಿಯಲ್ಲ. ಬಿಜೆಪಿ ಆಡಳಿತದ ರಾಜ್ಯಗಳು ಸೇರಿದಂತೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿ ಇರುವ ರಾಜ್ಯಗಳಲ್ಲೂ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಜಾರಿಯಾಗಿಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿದೆ. ಬಜೆಟ್‌ನಲ್ಲಿ ಶೇ.24.1 ಹಣವನ್ನೂ ಹಂಚಿಕೆ ಮಾಡಿದೆ. ಫಲಾನುಭವಿಗಳಿಗೆ ಈಗಾಗಲೇ 42,000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು. ಆದರೆ, ಪ್ರತಿಪಕ್ಷಗಳು ಸುಳ್ಳು ಆರೋಪ ಮಾಡುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಜೈನ ಸಮುದಾಯವೂ ಸೇರಿದಂತೆ ಎಲ್ಲ ಸಮುದಾಯಗಳಿಗೂ ಅನುದಾನ ನೀಡಲಾಗಿದೆ.

ಗ್ಯಾರಂಟಿ ಯೋಜನೆಗಳು ಮತ್ತು 7ನೇ ವೇತನ ಆಯೋಗ ಅನುಷ್ಠಾನಕ್ಕೆ 70 ಸಾವಿರ ಕೋಟಿ ರೂ. ಬೇಕಾಗುತ್ತದೆ. ಬಜೆಟ್‌ನಲ್ಲಿ ಎಲ್ಲ ಕ್ಷೇತ್ರಗಳ ಹೆಸರನ್ನೂ ಹೇಳಲಾಗುವುದಿಲ್ಲ. ಬಜೆಟ್‌ ಗಾತ್ರವೂ ದೊಡ್ಡದಾಗಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಶಾಸಕರಿಗೆ 8 ಸಾವಿರ ಕೋಟಿ ರೂ. ವಿಶೇಷ ಅನುದಾನವಿದೆ. ಅಧಿವೇಶನ ಮುಗಿದ ತಕ್ಷಣ ಆ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕ್ಷೇತ್ರ ಮರು ವಿಂಗಡಣೆಗೆ ಸಂಬಂಧಿಸಿದಂತೆ ಇದೇ 28ರಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಾನು ಮತ್ತು ಉಪ ಮುಖ್ಯಮಂತ್ರಿ ಭಾಗವಹಿಸಲಿದ್ದೇವೆ ಎಂದೂ ಮುಖ್ಯಮಂತ್ರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
ರಾಜ್ಯ ಬಜೆಟ್ 2025: 5 ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ ಅನುದಾನ ಮೀಸಲು

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶಾಸಕರಿಗೆ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಆದರೆ ಅನುದಾನವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ ಎಂದು ಶಾಸಕರೊಬ್ಬರು ಹೇಳಿದ್ದಾರೆ.

ರಾಜ್ಯದ ತೆರಿಗೆ ಪಾಲನ್ನು ನೀಡುವಲ್ಲಿ, ನೀರಾವರಿ ಯೋಜನೆಗಳನ್ನು ತೆರವುಗೊಳಿಸುವಲ್ಲಿ ಕೇಂದ್ರದ ಅನ್ಯಾಯದ ವಿಷಯವನ್ನು ಶಾಸಕರು ಕೈಗೆತ್ತಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರ ಸೂಚಿಸಿದ್ದಾರೆಂದು ತಿಳಿಸಿದರು.

ಮೇ ತಿಂಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಎರಡು ವರ್ಷಗಳನ್ನು ಸಂಭ್ರಮದಿಂದ ಆಚರಿಸಲು ಸಿದ್ಧರಾಗಿರಬೇಕು ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ,

ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳ ಸ್ಥಾಪಿಸುವ ಯೋಜನೆಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಸ್ಥಳಗಳನ್ನು ಖಚಿತಪಡಿಸಿಕೊಳ್ಳಬೇಕು. ಕುಂದುಕೊರತೆಗಳನ್ನು ಪರಿಹರಿಸಲು ನಿಯಮಿತವಾಗಿ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸಬೇಕೆಂದು ಸೂಚಿಸಿದ್ದಾರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com