BJP ವಿರೋಧದ ನಡುವೆ 'ಬೆಂಗಳೂರು ಅರಮನೆ ವಿಧೇಯಕ' ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಮೈಸೂರು ರಾಜಮನೆತನದ ವಾರಸುದಾರರಿಗೆ ರೂ.3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.
ಅರಮನೆ.
ಅರಮನೆ.
Updated on

ಬೆಂಗಳೂರು: ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ‘ಬೆಂಗಳೂರು ಅರಮನೆ(ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ವನ್ನು ಸೋಮವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.

ಸುಗ್ರೀವಾಜ್ಞೆ ರೂಪದಲ್ಲಿದ್ದ ಮಸೂದೆಯನ್ನು ಕೆಲ ಸಣ್ಣ ತಿದ್ದುಪಡಿಗಳೊಂದಿಗೆ ಕಾನೂನು ಸಚಿವ ಎಚ್‌.ಕೆ.ಪಾಟೀಲ್ ಅವರು ಸದನದಲ್ಲಿ ಮಂಡಿಸಿದರು.

ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಮೈಸೂರು ರಾಜಮನೆತನದ ವಾರಸುದಾರರಿಗೆ ರೂ.3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಅಷ್ಟು ದುಬಾರಿ ಮೌಲ್ಯದ ಟಿಡಿಆರ್‌ ನೀಡುವುದರಿಂದ ಸರ್ಕಾರದ ಆರ್ಥಿಕತೆ ಹಾಗೂ ಭವಿಷ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದನ್ನು ಸದನಕ್ಕೆ ಮನವರಿಕೆ ಮಾಡಿದರು.

ಇದಕ್ಕೆ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ ಧ್ವನಿ ಎತ್ತಿದರು. ಮೈಸೂರು ರಾಜರ ಕೊಡುಗೆಗಳನ್ನು ಸ್ಮರಿಸಿದರು.

ಬೆಂಗಳೂರು ಅರಮನೆ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲು ಮಸೂದೆಯನ್ನು ಮಂಡಿಸುವುದು ಸಮರ್ಥನೀಯವಲ್ಲ. ಇದು ರಾಜಮನೆತನದ ವಿರುದ್ಧ ಸರ್ಕಾರ ಸೇಡಿನ ರಾಜಕೀಯ ನಡೆಸುತ್ತಿರುವಂತೆ ತೋರುತ್ತದೆ ಎಂದು ಹೇಳಿದರು.

ಅರಮನೆ.
ವಿಧಾನಸಭೆ ಅಧಿವೇಶನ: ಬೆಂಗಳೂರು ಅರಮನೆ ವಿಧೇಯಕ ಸೇರಿ 5 ಮಸೂದೆಗಳ ಮಂಡನೆ

ಬೆಂಗಳೂರಿನಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅರಮನೆ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲು ಸಾಮಾನ್ಯ ಮಸೂದೆಯನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಈ ಮಸೂದೆ ರಾಜಮನೆತನಕ್ಕೆ ಅಗೌರವ ತೋರುತ್ತದೆ. ಸರ್ಕಾರ ಮಸೂದೆಯನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.

ಸರ್ಕಾರ ರಾಜ ಮನೆತನದವರನ್ನು ಕರೆದು ಸಹಕಾರ ಕೇಳಬೇಕಿತ್ತು. ಇಲ್ಲವೇ ನ್ಯಾಯಾಲಯಕ್ಕೆ ನಿಗದಿತ 3 ಸಾವಿರ ಕೋಟಿ ರೂ. ಮೊತ್ತದಲ್ಲಿ ಕಡಿಮೆ ಮಾಡುವಂತೆ ಮತ್ತೆ ಮೇಲ್ಮನವಿ ಸಲ್ಲಿಸಬೇಕಿತ್ತು. ಈ ಸಮಸ್ಯೆಗೆ ನ್ಯಾಯಾಲಯದಲ್ಲೇ ಪರಿಹಾರ ಕಂಡುಕೊಳ್ಳುವುದು ಒಳಿತು. ಇಲ್ಲದಿದ್ದರೆ ರಾಜಮನೆತನದ ವಿರುದ್ಧ ಸರ್ಕಾರ ಇದೆ ಎಂಬ ಭಾವನೆ ಜನರಲ್ಲಿ ಬರಲಿದೆ. ಅದನ್ನು ಬಿಟ್ಟು ಒಂದು ಕುಟುಂಬದ ವಿರುದ್ಧ ವಿಧೇಯಕ ತರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧಿಸಿದರು.

ಸಂಜಯ್ ನಗರದ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾರ್ಗಸೂಚಿ ಮೌಲ್ಯವು ಪ್ರತಿ ಚದರ ಮೀಟರ್‌ಗೆ 2 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದು, ಪರಿಹಾರದ ಜೊತೆಗೆ ಅದು 3,000 ಕೋಟಿ ರೂ. ಟಿಡಿಆರ್ ತಲುಪುತ್ತದೆ. ಅದನ್ನು ರಾಜಮನೆತನಕ್ಕೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್ ಅವರು, ಭೂಸ್ವಾಧೀನಕ್ಕಾಗಿ ಕಾನೂನುಗಳನ್ನು ತರುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ರೀತಿಯ ಅಧಿಕಾರ ಬಳಕೆ ಮಾಡಲಾಗಿದೆ. ನ್ಯಾಯಾಲಯಗಳು ಕೂಡ ಅದನ್ನು ಎತ್ತಿಹಿಡಿದಿವೆ ಎಂದು ಗಮನಸೆಳೆದರು. ಬಳಿಕ ವಿರೋಧ ಪಕ್ಷಗಳು ಸಭಾತ್ಯಾಗ ಮಾಡುತ್ತಿದ್ದಂತೆ, ಮಸೂದೆಯನ್ನು ಅಂಗೀಕರಿಸಲಾಯಿತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com