
ಬೆಂಗಳೂರು: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಬೆಲೆ ತೀವ್ರ ಕುಸಿತ ಕಂಡಿದ್ದು, ಲಕ್ಷಾಂತರ ಒಣಮೆಣಸು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಬೆಳೆಯುವ ಒಣಮೆಣಸಿನಕಾಯಿಗೆ ಬೆಲೆ ಕೊರತೆ ಪಾವತಿ ಯೋಜನೆಯನ್ನು ಮಂಜೂರು ಮಾಡಿದೆ. ಅಲ್ಲಿ ಪ್ರತಿ ಕ್ವಿಂಟಾಲ್ ಒಣಮೆಣಸಿನಕಾಯಿಗೆ 11,781 ರೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಇದು ಸ್ವಾಗತಾರ್ಹ ನಡೆಯಾಗಿದ್ದು, ರಾಜ್ಯದ ಒಣಮೆಣಸಿನಕಾಯಿ ರೈತರ ಸಂಕಷ್ಟಕ್ಕೂ ಕೇಂದ್ರ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಒಣಮೆಣಸಿನಕಾಯಿ ಉತ್ಪಾದನೆ ವೆಚ್ಚ ಪ್ರತಿ ಕ್ವಿಂಟಾಲ್ಗೆ 12,675 ರೂ. ಇರುವುದಾಗಿ ಕರ್ನಾಟಕ ಕೃಷಿ ಬೆಲೆ ಆಯೋಗ ನಿಗದಿಪಡಿಸಿದೆ. ಆದರೆ, ರೈತರು ಪ್ರತಿ ಕ್ವಿಂಟಾಲ್ಗೆ 8,300 ರೂ.ಗೆ ಒಣಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ ಎಂದು ತಿಳಿಸಿದ್ದಾರೆ.
ಬರಪೀಡಿತ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚು ಒಣಮೆಣಸಿನಕಾಯಿ ಬೆಳೆಯಲಾಗುತ್ತದೆ. ಬೆಲೆ ಕುಸಿತದಿಂದ ಅವರು ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಿಸಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಜಾರಿಗೊಳಿಸುವುದು ಅನಿವಾರ್ಯ. ಇದರ ಜೊತೆಗೆ, ರೈತರಿಗೆ ಉತ್ತಮ ಸೇವೆ ಸಲ್ಲಿಸಲು ಅಸ್ತಿತ್ವದಲ್ಲಿರುವ ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದ ಒಣಮೆಣಸಿನಕಾಯಿಗೆ ಪ್ರತಿ ಕ್ವಿಂಟಾಲ್ಗೆ 13,500 ರೂ. ಎಂಐಪಿ ನಿಗದಿ ಮಾಡುವಂತೆ ಮನವಿ ಮಾಡಿದ್ದಾರೆ.
ಜೊತೆಗೆ, ಕನಿಷ್ಠ ಶೇ.75 ಒಣಮೆಣಸಿನಕಾಯಿ ಉತ್ಪಾದನೆಯನ್ನು ಎಂಐಪಿ ಯೋಜನೆಯ ವ್ಯಾಪ್ತಿಗೊಳಪಡಿಸುವಂತೆ ಕೋರಿದ್ದಾರೆ.
ಕೇಂದ್ರ ಸರ್ಕಾರ ಬೆಲೆ ಕೊರತೆ ಪಾವತಿ ಯೋಜನೆಯ ಪೂರ್ಣ ಹೊರೆಯನ್ನು ಹೊರುವಂತೆಯೂ ಮನವಿ ಮಾಡಿದ್ದಾರೆ. ರಾಜ್ಯದ ರೈತರನ್ನು ಸಂಕಷ್ಟದಿಂದ ಮೇಲೆತ್ತಲು ಕೂಡಲೇ ಈ ಸಂಬಂಧ ಕೇಂದ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಯ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆರ್ಥಿಕ ಹೊರೆಯನ್ನು 50:50 ಅನುಪಾತದಲ್ಲಿ ಹಂಚಿಕೊಳ್ಳಲಾಗುತ್ತದೆ. ಕೆಂಪು ಮೆಣಸಿನಕಾಯಿಯ ಬೆಲೆಗಳು ಹೆಚ್ಚಾಗಿ ಕೇಂದ್ರ ಸರ್ಕಾರದ ದೇಶೀಯ ಮತ್ತು ರಫ್ತು ನೀತಿಗಳ ಮೇಲೆ ಅವಲಂಬಿತವಾಗಿರುತ್ತದೆ, ಇದು ಮಾರುಕಟ್ಟೆ ಸ್ಥಿರತೆ ಮತ್ತು ರೈತರ ಗಳಿಕೆಯ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಆದ್ದರಿಂದ, ರೈತರಿಗೆ ನ್ಯಾಯಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಬೆಲೆ ಕೊರತೆ ಪಾವತಿಯ ಸಂಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಬೇಕೆಂದು ವಿನಂತಿಸುತ್ತೇವೆಂದು ಹೇಳಿದ್ದಾರೆ.
ಆಂಧ್ರ ಪ್ರದೇಶದ ರೈತರಿಗೆ ನೀಡುತ್ತಿರುವ ಯೋಜನೆಯ ಫಲ ಪಡೆಯಲು ಕರ್ನಾಟಕರ ರೈತರು ಕೂಡ ಅರ್ಹರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಹಾರ ಒದಗಿಸಿದರೆ, ದೇಶಾದ್ಯಂತ ರೈತರ ಕಲ್ಯಾಣಕ್ಕೆ ಕೇಂದ್ರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಮನವಿ ಮಾಡಿದ್ದಾರೆ.
Advertisement