
ಬೆಂಗಳೂರು: ವಿವಿಧ ಯೋಜನೆಗಳ ಅಡಿಯಲ್ಲಿ 2.30 ಲಕ್ಷ ಮನೆಗಳ ನಿರ್ಮಾಣವನ್ನು ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಬುಧವಾರ ಹೇಳಿದರು.
ಬಿಜೆಪಿ ಎಂಎಲ್‌ಸಿಗಳಾದ ಕೆ.ಎಸ್. ನವೀನ್ ಮತ್ತು ಎಸ್.ವಿ. ಸಂಕನೂರ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಸವ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ, ದೇವರಾಜ ಅರಸು ವಸತಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಇತರ ವಸತಿ ಯೋಜನೆಗಳ ಅಡಿಯಲ್ಲಿ 9.5 ಲಕ್ಷ ಮನೆಗಳನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ಕಾಮಗಾರಿ ಪೂರ್ಣಕ್ಕೆ 13,500 ಕೋಟಿ ರೂ.ಗಳಿಗೂ ಹೆಚ್ಚು ಅನುದಾನದ ಅಗತ್ಯವಿದೆ, ಹಂತ ಹಂತವಾಗಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ 2.30 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಒಂದೇ ಒಂದು ಮನೆ ಹಂಚಿಕೆ ಮಾಡಿಲ್ಲ. 2024-25ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಒಳಗೊಂಡಂತೆ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಲಾಗಿತ್ತು. ಈವರೆಗೂ 1,49,521 ಮನೆಗಳನ್ನ ಪೂರ್ಣಗೊಳಿಸಲಾಗಿದೆ.
2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ (ಗ್ರಾಮೀಣ) 7.03 ಲಕ್ಷದಲ್ಲಿ ಮನೆ ನಿರ್ಮಾಣ ಮಾಡಬೇಕಿದೆ. ಈ ಪೈಕಿ 3 ಲಕ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರ ಪಾವತಿಸಿದರೆ, ಉಳಿದ 4.5 ಲಕ್ಷ| ಹಣವನ್ನು ಫಲಾನುಭವಿಗಳು ಪಾವತಿಸಬೇಕು. ಬಡತನದಲ್ಲಿರುವ ಜನರು ಇಷ್ಟು ಹಣ ಪಾವತಿಸಲು ಸಾಧ್ಯವಾಗದೆ ಸಂಕಷ್ಟಪಡುತ್ತಿದ್ದಾರೆ. ಇದರಿಂದ ಯೋಜನೆ ಪೂರ್ಣಗೊಳ್ಳಲು ತಡವಾಗುತ್ತಿದೆ. ಈವರೆಗೆ 1.17 ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರು ಮಾಡಲಾಗಿದ್ದು, ಬಾಕಿ ಮನೆಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ವಿವಿಧ ವಸತಿ ಯೋಜನೆಯಡಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆಯಿದೆ. ಸಿಎಂ ಬಳಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ವಸತಿ ಯೋಜನೆಯಡಿ ನೀಡಲಾಗುತ್ತಿರುವ 1.20 ಲಕ್ಷ ರೂ. ಸಹಾಯಧನ ಸಾಕಾಗುತ್ತಿಲ್ಲ. ಇದನ್ನ ಜಾಸ್ತಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಸಾಮಾನ್ಯ ವರ್ಗಕ್ಕೆ 3 ಲಕ್ಷ ರೂ. ಮತ್ತು ಪರಿಶಿಷ್ಟ ಜಾತಿ-ಪಂಗಡಗಳಿಗೆ 2 ಲಕ್ಷ ರೂ. ಜಾಸ್ತಿ ಮಾಡಲು ಮನವಿ ಮಾಡಿದ್ದೇವೆ. ವಸತಿ ಯೋಜನೆ ಸಹಾಯಧನ ಹೆಚ್ಚಳ ಮಾಡುವ ಇಚ್ಛೆ ಸರ್ಕಾರಕ್ಕಿದೆ ಎಂದು ತಿಳಿಸಿದರು
Advertisement