
ಬೆಂಗಳೂರು: ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ 5200 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಮಾತ್ರವಲ್ಲದೆ, ಭಾರತ ಮತ್ತು ಪ್ರಪಂಚದಾದ್ಯಂತದ ಸಾರ್ವಜನಿಕ ಸಾರಿಗೆ ಸೇವೆಗಳು ಲಾಭಕ್ಕಿಂತ ಹೆಚ್ಚಿನ ನಷ್ಟವನ್ನೇ ಎದುರಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಬಿಎಂಟಿಸಿಗಳಿಗೆ 5,200 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.
ಒಂದು ಗ್ರಾಮವು 1.5 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ಸೇವೆಯನ್ನು ಹೊಂದಿದ್ದರೆ ಅದನ್ನು ಬಸ್ ಸೇವೆ ಹೊಂದಿರುವ ಗ್ರಾಮವೆಂದೇ ಪರಿಗಣಿಸಲಾಗುತ್ತದೆ. ಅದನ್ನು ಗಣನೆಗೆ ತೆಗೆದುಕೊಂಡು, ರಾಜ್ಯದ ಸುಮಾರು ಶೇ.97ರಷ್ಟು ಹಳ್ಳಿಗಳಿಗೆ ನಾವು ಬಸ್ ಸೇವೆಗಳನ್ನು ಒದಗಿಸುತ್ತಿದ್ದೇವೆ. ಎಲ್ಲಾ ಬಸ್ ಸೇವೆಗಳೂ ಶೇ. 40 ರಷ್ಟು ನಷ್ಟದಲ್ಲಿವೆ, ಶೇ.30 ರಷ್ಟರಲ್ಲಿ ಲಾಭವೂ ಇಲ್ಲ, ನಷ್ಟವೂ ಇಲ್ಲ, ಉಳಿದ ಶೇ. 30 ರಷ್ಟು ಮಾತ್ರ, ದೀರ್ಘ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಬಸ್ ಗಳಲ್ಲಿ ಲಾಭವನ್ನು ನೋಡುತ್ತಿದ್ದೇವೆ. ಲಾಭ-ನಷ್ಟವನ್ನು ಲೆಕ್ಕಿಸದೆ ಸರ್ಕಾರವು ಎಲ್ಲಾ ಮಾರ್ಗಗಳಲ್ಲಿಯೂ ಬಸ್ ಸೇವೆ ಒದಗಿಸುತ್ತಿದೆ. ಖಾಸಗಿ ವಲಯ ಲಾಭ ಗಳಿಸುವ ಮಾರ್ಗಗಳಲ್ಲಿ ಮಾತ್ರ ಸೇವೆ ಒದಗಿಸಲಿದ್ದು, ಸರ್ಕಾರ ಇದಕ್ಕೆ ಭಿನ್ನವಾಗಿದೆ. ಸಾರಿಗೆ ಕಾರ್ಯಾಚರಣೆಯ ವೆಚ್ಚವು ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಹೆಚ್ಚುತ್ತಿದೆ, ಡೀಸೆಲ್ ದರದಲ್ಲಿ ಏರಿಕೆ, ನೌಕರರ ಸಂಬಳ, ಬಿಡಿಭಾಗಗಳ ಬೆಲೆಯಲ್ಲಿನ ಏರಿಕೆ ಮತ್ತು ಇತರ ವೆಚ್ಚಗಳು ನಷ್ಟಕ್ಕೆ ಕಾರಣವಾಗಿವೆ ಎಂದು ಹೇಳಿದರು.
ಬಳಿಕ ನಷ್ಟದ ಸ್ಥಿತಿ, ಅವುಗಳನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸಿ, ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ವೇತನಕ್ಕೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇಂಧನ ಬೆಲೆ ಹೆಚ್ಚಳದೊಂದಿಗೆ ಸಿಬ್ಬಂದಿ ಹಾಗೂ ವಾಹನ ಬಿಡಿಭಾಗಗಳು ಅಧಿಕಗೊಂಡಿವೆ. ಆರ್ಥಿಕ ಹೊರೆ ಉಂಟಾಗಿದ್ದರಿಂದ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ 9,978 ಕೋಟಿ ಅನುದಾನ ಪೈಕಿ 7,796 ಕೋಟಿ ಈಗಾಗಲೇ ಮಂಜೂರಾಗಿದೆ. ಬಾಕಿ ಸುಮಾರು 2 ಸಾವಿರ ಕೋಟಿ ಬಿಡುಗಡೆಯಾಗಬೇಕಿದೆ. ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದು ಉತ್ತರಿಸಿದರು.
ರಾಜ್ಯ ಸರ್ಕಾರ ಅಧಿಕಾರ ಬಂದ ಬಳಿಕ ಇದುವರೆಗೂ 5360 ಬಸ್ ಖರೀದಿಸಿದೆ. ಬಿಎಂಟಿಸಿ ನಿಗಮ ಹೊರತುಪಡಿಸಿದರೆ ಹಿಂದಿನ ಸರ್ಕಾರವು ಇನ್ನಿತರ ಸಾರಿಗೆ ನಿಗಮಗಳಿಗೆ ಬಸ್ ಖರೀದಿಗೆ ಮುಂದಾಗಿರಲಿಲ್ಲ. 2016ರಿಂದ 23ರವರೆಗೆ 14 ಸಾವಿರ ಮಂದಿ ನೌಕರರು ನಿವೃತ್ತರಾಗಿದ್ದರಿಂದ ನೇಮಕಾತಿ ನಡೆದಿರಲಿಲ್ಲ. ಖಾಲಿ ಹಾಗೂ ತೆರವಾಗಿರುವ ಹುದ್ದೆಗಳ ಭರ್ತಿಗಾಗಿ 9 ಸಾವಿರ ಮಂದಿಯನ್ನು ನೇಮಕಾತಿ ಮಾಡಲಾಗಿದೆ.
1 ಸಾವಿರ ಮಂದಿಗೆ ಅನುಕಂಪ ಆಧಾರದ ಮೇರೆಗೆ ಉದ್ಯೋಗ ನೀಡಲಾಗಿದೆ. ದಿನಕ್ಕೆ 1.96 ಲಕ್ಷ ಟ್ರಿಪ್ಗಳು ಸಾರಿಗೆ ನಿಗಮಗಳ ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಸಧೃಢ ಆರೋಗ್ಯಕ್ಕಾಗಿ ಕೆಎಸ್‌ಆರ್‌ಟಿಸಿ ನೌಕರರು ವಂತಿಗೆ ರೂಪದಲ್ಲಿ ಮಾಸಿಕ 650 ರೂಪಾಯಿ ಪಾವತಿಸಿದರೆ ನೌಕರನ ಕುಟುಂಬಸ್ಥರು ಚಿಕಿತ್ಸೆ ಪಡೆಯಬಹುದಾಗಿದೆ. ಇನ್ನುಳಿದ ಸಾರಿಗೆ ನಿಗಮಗಳಿಗೆ ಯೋಜನೆ ವಿಸ್ತರಿಸಿದ್ದು, ನೌಕರರಿಂದ ದಾಖಲಾತಿ ಪಡೆಯಲಾಗುತ್ತಿದೆ. ಇನ್ನೂ ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಒಡಂಬಡಿಕೆಯಾದ ರಾಜ್ಯದ 350 ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು.
Advertisement