ಬೆಂಗಳೂರು ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ಶೀಘ್ರದಲ್ಲೇ ನೀರಿನ ದರ ಹೆಚ್ಚಳ

2014 ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲಾಗಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ(BWSSB)ಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on

ಬೆಂಗಳೂರು: ಈಗಾಗಲೇ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ನಮ್ಮ ಮೆಟ್ರೋ ದರ ಏರಿಕೆಯಿಂದ ತತ್ತರಿಸಿರುವ ರಾಜಧಾನಿ ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ದರ ಹೆಚ್ಚಳ ಶಾಕ್ ನೀಡಲು ಮುಂದಾಗಿದೆ.

2014 ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲಾಗಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ(BWSSB)ಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ಕೇವಲ ಒಂದು ಪೈಸೆ ಹೆಚ್ಚಳವನ್ನು ಪರಿಗಣಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ನೀರಿನ ದರ ಹೆಚ್ಚಳದ ಬಗ್ಗೆ ಶೀಘ್ರದಲ್ಲೇ ಬೆಂಗಳೂರಿನ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ರಾಮೋಜಿ ಗೌಡ ಅವರು ಬೆಂಗಳೂರಿನ ಪೂರ್ವ ಭಾಗಗಳಲ್ಲಿ ನೀರಿನ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಡಿಸಿಎಂ ಈ ಹೇಳಿಕೆ ನೀಡಿದ್ದಾರೆ.

2014 ರಿಂದ ನೀರಿನ ದರವನ್ನು ಹೆಚ್ಚಿಸಲಾಗಿಲ್ಲ. ಇದರಿಂದಾಗಿ BWSSB ವಾರ್ಷಿಕ 1,000 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಹೀಗಾಗಿ ನಾವು ಕನಿಷ್ಠ ಪಕ್ಷ ಒಂದು ಪೈಸೆಯಾದರೂ ನೀರಿನ ದರ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಮಂಡಳಿಯ ವಿದ್ಯುತ್ ಬಿಲ್ ಸಹ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮಂಡಳಿಯವರು 7-8 ಪೈಸೆ ಏರಿಕೆಗೆ ಮುಂದಾಗಿದ್ದರು. ನಾನು ಸದ್ಯಕ್ಕೆ 1 ಪೈಸೆಯಷ್ಟು ಹೆಚ್ಚಳ ಮಾಡಿ ಸಾಕು ಎಂದು ಹೇಳಿದ್ದೇನೆ ಎಂದರು.

ಡಿಕೆ ಶಿವಕುಮಾರ್
ಜಲ ಮಂಡಳಿ ಉಳಿಸಬೇಕು, ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ ಶಿವಕುಮಾರ್

ಬೇಸಿಗೆ ಆರಂಭವಾಗುತ್ತಿದ್ದು, ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಖಾಸಗಿ ಟ್ಯಾಂಕರ್ ಗಳು ದುಪ್ಪಟ್ಟು ಹಣದ ಬೇಡಿಕೆ ಇಡುತ್ತಿದ್ದು, ಜನರಿಗೆ ಉಚಿತವಾಗಿ ನೀರು ಪೂರೈಸಬೇಕು ಹಾಗೂ ಕಾವೇರಿ ಸಂಪರ್ಕ ನೀಡಿರುವ ಮನೆಗಳಿಗೆ ಶೀಘ್ರ ನೀರು ಒದಗಿಸಬೇಕು ಎಂದು ರಾಮೋಜಿ ಗೌಡ ಹೇಳಿದರು.

ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ಶಿವರಾತ್ರಿ ಕಳೆದಿದ್ದು ಬೇಸಿಗೆ ತೀವ್ರತೆ ಹೆಚ್ಚಾಗಿ ಉಷ್ಣಾಂಶ ಏರಿಕೆಯಾಗಿದೆ. ಆದರೆ ಕಳೆದ ವರ್ಷ ಬಹಳ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. 7 ಸಾವಿರ ಕೊಳವೆ ಬಾವಿಗಳು ಬತ್ತಿದ್ದವು. ಹೀಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು. ಇದೇ 22ರಂದು ಜಲಸಂರಕ್ಷಣಾ ದಿನವಾಗಿದ್ದು ಒಂದು ತಿಂಗಳ ಕಾಲ ಜಲ ಸಂರಕ್ಷಣೆ ವಿಚಾರವಾಗಿ ಜಾಗೃತಿ ಅಭಿಯಾನ ಮಾಡಲು ತೀರ್ಮಾನಿಸಿದ್ದೇವೆ. ಕಾವೇರಿ 5ನೇ ಹಂತದ ಯೋಜನೆಯನ್ನು ಪೂರ್ಣಗೊಳಿಸಿ ನೀರನ್ನು ಹೊರ ತರಲಾಗಿದೆ. 110 ಹಳ್ಳಿಗಳಿಗೆ ನೀರು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com