
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ನಮ್ಮ ಸರಕಾರ ಬದ್ಧತೆ ತೋರಿಸಿದೆ. ಈ ಬಗ್ಗೆ ನಾನು ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಿದ್ದೇನೆ. ಬಿಜೆಪಿ ಸದಸ್ಯರು ದೆಹಲಿಗೆ ಹೋಗಿ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ, ನಾವು ಅದನ್ನು ಒಟ್ಟಿಗೆ ಪೂರ್ಣಗೊಳಿಸಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.
ಪ್ರಶ್ನೋತ್ತರ ಕಲಾಪದ ವೇಳೆ ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಹಾಗೂ ಹನುಮಂತ ನಿರಾಣಿ, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಅನುಷ್ಠಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರಿಸಿದರು.
519.60 ಮೀ ಇಂದ 524.26 ಮೀ ವರೆಗೆ ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು ಎಂಬುದು ಸರ್ಕಾರದ ಮುಂದಿದೆ. ಅಣೆಕಟ್ಟನ್ನು ಎತ್ತರ ಮಾಡಿದರೆ ಸುಮಾರು 1 ಲಕ್ಷದ 36 ಸಾವಿರ ಎಕರೆ ಮುಳುಗಡೆಯಾಗುತ್ತದೆ. ಸಂತ್ರಸ್ತರು ಮುಳುಗಡೆ ಪರಿಹಾರವನ್ನು ಈಗಲೇ ನೀಡಿ ಎಂದು ಕೇಳುತ್ತಿದ್ದಾರೆ. ನನಗೆ ಈ ಬಗ್ಗೆ ಬೇರೆ ಅಭಿಪ್ರಾಯವಿತ್ತು. ಆದರೆ. ಮುಖ್ಯಮಂತ್ರಿಗಳು ಸಭೆ ನಡೆಸಿ ಬೇರೆಯದೆ ತೀರ್ಮಾನ ಮಾಡಿದರು. ಕೇಂದ್ರ ಸರ್ಕಾರವೂ ಎರಡು ಹಂತದಲ್ಲಿ ಈ ಕಾಮಗಾರಿ ನಡೆಸಬೇಕು ಎಂದು ತಿಳಿಸಿತು. ಆದ ಕಾರಣಕ್ಕೆ ಈ ವಿಚಾರವನ್ನು ಕೇಂದ್ರದವರು ಸಹ ಈವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದೇ ಬಾರಿಗೆ ಆಗುವುದಿಲ್ಲ, ಹಂತ, ಹಂತವಾಗಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡು ಚರ್ಚೆ ಮಾಡಲಾಗುವುದು. ಕೇಂದ್ರ ಸರಕಾರ ಆದಷ್ಟು ಬೇಗ ಈ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಆಗ ಸರಕಾರ ಈ ಯೋಜನೆ ಜಾರಿಗೆ ಸಂಪನ್ಮೂಲ ಹುಡುಕಿ ಯೋಜನೆ ಪೂರ್ಣಗೊಳಿಸಬಹುದು ಎಂದು ತಿಳಿಸಿದರು.
ಪುನರ್ವಸತಿಗೆ 6 ಸಾವಿರ ಎಕರೆಯಲ್ಲಿ 3,400 ಎಕರೆ ಅಂದರೆ ಶೇ.53ರಷ್ಟು ಸೌಲಭ್ಯ ನೀಡಲಾಗಿದೆ. ಕಾಲುವೆ ನಿರ್ಮಾಣಕ್ಕೆ 51 ಸಾವಿರ ಎಕರೆ ಜಮೀನು ಬೇಕು, ಇಲ್ಲಿವರೆಗೆ 22 ಸಾವಿರ ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸಬ್ ಮರ್ಜ್‍ಗಾಗಿ 75 ಸಾವಿರ ಎಕರೆಯಲ್ಲಿ 2,504 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬಿ.ಎಸ್.ಯಡಿಯೂರಪ್ಪ ಅವರು, ಬಸವರಾಜ ಬೊಮ್ಮಾಯಿ ಅವರು ಹಾಗೂ ನಮ್ಮ ಕಾಲದಲ್ಲಿಯೂ ಕೆಲವು ಬಾರಿ ನೀರಾವರಿ ಇಲಾಖೆಯ ಶೇ.25ರಷ್ಟು ಹಣವನ್ನು ದೇವಸ್ಥಾನ, ರಸ್ತೆ, ಸಮುದಾಯ, ರೈತರ ಭವನ ಸೇರಿದಂತೆ ಇತರೇ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ಆದ ಕಾರಣ ಈಗಿನ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ನಾನು ಮತ್ತು ಮುಖ್ಯಮಂತ್ರಿಗಳು ಮಾತನಾಡಿ ನೀರಾವರಿ ಇಲಾಖೆ ದುಡ್ಡು ನೀರಾವರಿ ಕೆಲಸಗಳಿಗೆ ಮಾತ್ರ ಬಳಸಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
Advertisement