ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ: ವಿಪಕ್ಷಗಳ ವಿರೋಧ ನಡುವೆಯೂ ಸಚಿವ ಸಂಪುಟ ಗ್ರೀನ್ ಸಿಗ್ನಲ್

ವಿಧಾನಸೌಧದ ಕ್ಯಾಬಿನೆಟ್ ಹಾಲ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ವಿಚಾರವಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದಂತೆ ಸದನಕ್ಕೆ ವಿಧೇಯಕ ತರಲು ಅನುಮೋದನೆ ನೀಡಲಾಗಿದೆ.
Cabinet Meeting( File image)
ಸಂಪುಟ ಸಭೆ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದವರು ಹಾಗೂ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ರೂ.2 ಕೋಟಿ ವೆಚ್ಚದ ಕಾಮಗಾರಿಗಳು, ರೂ.1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ತೀರ್ಮಾನದ ಜೊತೆಗೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಲು ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ವಿಧಾನಸೌಧದ ಕ್ಯಾಬಿನೆಟ್ ಹಾಲ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ವಿಚಾರವಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದಂತೆ ಸದನಕ್ಕೆ ವಿಧೇಯಕ ತರಲು ಅನುಮೋದನೆ ನೀಡಲಾಗಿದೆ.

ಒಂದು ಕೋಟಿವರೆಗಿನ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದು. ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗೆ ಮಾತ್ರ ಇದ್ದ ಕಾಮಗಾರಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ವಿಸ್ತರಿಸಿ ಗುತ್ತಿಗೆ ನೀಡಲು ಅವಕಾಶ ಕೊಡಲು ನಿರ್ಧಾರ ಮಾಡಲಾಗಿದೆ.

ಎಸ್​ಸಿ ಎಸ್​ಟಿ ಸಮುದಾಯಕ್ಕೆ ಈ ಹಿಂದೆ ಇದ್ದ 1 ಕೋಟಿವರೆಗಿನ ಮೊತ್ತ ವಿಸ್ತರಿಸಿ 2 ಕೋಟಿವರೆಗೆ ಮೀಸಲಾತಿ ಅವಕಾಶ ಕಲ್ಪಿಸಲಿದೆ. ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದೇ ವೇಳೆ ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೂ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಭಾಗದಲ್ಲಿ ಇ ಖಾತಾ ನೀಡಲು ಸಚಿವ ಸಂಪುಟದ ಒಪ್ಪಿಗೆ ನೀಡಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಅನುಮೋದನೆ ಕೊಡಲಾಗಿದೆ.

Cabinet Meeting( File image)
ಮುಸ್ಲಿಂ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ: ಟಿಡಿಪಿ ನಿರ್ಧಾರ ಟೀಕಿಸಿದ ಬಿಜೆಪಿ ನಾಯಕ ಸಿಟಿ ರವಿ

ಈ ವಿಧೇಯಕ ಅಂಗೀಕಾರವಾದರೆ, ಗ್ರಾಮೀಣ ಭಾಗದ ಕಂದಾಯ ಬಡಾವಣೆ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಮನೆ ನಿವೇಶನಗಳು ಸಕ್ರಮ ಮಾಡಲಾಗುತ್ತದೆ. ಕೆಪಿಎಸ್​ಸಿಯಲ್ಲಿ ಲೋಪ ದೋಷಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣಾ ಕ್ರಮಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಇದಲ್ಲದೆ, ಲೋಕಸೇವಾ ಆಯೋಗದ ಪರೀಕ್ಷೆ ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ. ಸಮಿತಿ ಶಿಫಾರಸುಗಳನ್ನು ಪಾಲನೆ ಮಾಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಸಮಾಲೋಚನೆ ಮಾಡಲಾಗಿದೆ.

ಲೋಕಸೇವಾ ಆಯೋಗದ ಸಮಗ್ರ ಸುಧಾರಣೆಗೆ ಕ್ರಮ ವಹಿಸಲು ಸಂಪುಟ ತೀರ್ಮಾನ ಕೈಗೊಳ್ಳಲಾಗಿದೆ. ಆಯೋಗದ ಕಾರ್ಯವೈಖರಿ ಮತ್ತು ಅಕ್ರಮಗಳ ಕುರಿತು ವಿಧಾನಸಭೆಯಲ್ಲಿ ಇತ್ತೀಚೆಗೆ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆಯೋಗದ ಸದಸ್ಯರ ಸಂಖ್ಯೆಯನ್ನು 8ಕ್ಕೆ (ಅಧ್ಯಕ್ಷರು ಸೇರಿ) ಇಳಿಸಲು ಸಚಿವ ಸಂಪುಟ ಸಭೆಯಲ್ಲಿ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಈಗ ಸದಸ್ಯರ ಸಂಖ್ಯೆ 15 ಇದೆ. ಆಯೋಗಕ್ಕೆ ಅರ್ಹರನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಶೋಧ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಚರ್ಚೆಯಾಗಿದ್ದು, ಮುಂದಿನ ಅಧಿವೇಶನದ ಹೊತ್ತಿಗೆ ಸಮಗ್ರ ಸುಧಾರಣಾ ವಿಧೇಯಕ ಮಂಡನೆ ಮಾಡುವ ಸಾಧ್ಯತೆ ಇದೆ.

Cabinet Meeting( File image)
ಮುಸ್ಲಿಂ ಮೀಸಲಾತಿ ತೆಗೆದು ಅದನ್ನು SC/ST ಗಳಿಗೆ ನೀಡುತ್ತೇವೆ: ಗೃಹ ಸಚಿವ ಅಮಿತ್ ಶಾ

ಸಂಪುಟ ಸಭೆಯ ಇತರೆ ನಿರ್ಧಾರಗಳು...

  • ರಾಜ್ಯದಲ್ಲಿ ‘ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ-ವಿ2’ ಅನುಷ್ಠಾನ

  • ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ಇಲಾಖೆಯ 4 ಎಕರೆ 25 ಗುಂಟೆ ಜಾಗವನ್ನು ಅಂತಾರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ಸಂಸ್ಥೆಗೆ ಎರಡು ವರ್ಷಗಳ ಅವಧಿಗೆ ಬಾಡಿಗೆ ರಹಿತವಾಗಿ ನೀಡುವುದು.

  • ಬೆಂಗಳೂರು ಬಯೋಇನ್ನೋವೇಷನ್ ಸೆಂಟರ್ (BBC) ಪುನರ್ನಿರ್ಮಾಣ ಮತ್ತು ಉಪಕರಣಗಳ ಬದಲಿಗಾಗಿ 96.77 ಕೋಟಿ ರೂ. ಸಹಾಯಕ್ಕಾಗಿ ಅನುಮೋದನೆ.

  • ಬೆಂಗಳೂರಿನಲ್ಲಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ನವೀಕರಣ, ಹೊಸದಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಹಾಗೂ ಉಪಕರಣ/ ಪೀಠೋಪಕರಣ ಖರೀದಿಗೆ 40.03 ಕೋಟಿ ರೂ. ವೆಚ್ಚ

  • ಪಿಎಂ ಜನ್​ವುನ್ ಬ್ಯಾಚ್-2ರಡಿ 39.25 ಕೋಟಿ ರೂ. ವೆಚ್ಚದಲ್ಲಿ 39.99 ಕಿ.ಮೀ. ಉದ್ದದ 22 ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಯು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಏಜೆನ್ಸಿಯಿಂದ ಅನುಷ್ಠಾನ

  • ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನದಡಿ ಅಂಗನವಾಡಿ ಕೇಂದ್ರಗಳಿಗೆ 21.53 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 26918 ಗ್ರೋತ್ ಮಾನಿಟರಿಂಗ್ ಡಿವೈಸ್ ಕಿಟ್​ಗಳ ಖರೀದಿತ

  • ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಅಪರ ನಿಬಂಧಕರು (ಕಾನೂನು ಸಲಹೆ), ಉಪ ಲೋಕಾಯುಕ್ತ-2 ಅವರ ಆಪ್ತ ಕಾರ್ಯದರ್ಶಿ ಹುದ್ದೆಗಳಿಗೆ ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ಕೆ.ಅಮರನಾರಾಯಣ ಮತ್ತು ಸಿ.ರಾಜಶೇಖರ ಗುತ್ತಿಗೆ ಆಧಾರದಲ್ಲಿ ನೇಮಕತ

  • ಅಗ್ನಿ ದುರಂತದಲ್ಲಿ ಹಾನಿಗೀಡಾದ ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರ ದುರಸ್ತಿ, ಪುನರ್ ಸ್ಥಾಪನೆ ಮತ್ತು ಉಪಕರಣಗಳ ಬದಲಾವಣೆಗೆ 96.77 ಕೋಟಿ ರೂ. ನೆರವು

  • ಮಂಡ್ಯದಲ್ಲಿ ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪನೆಯನ್ನು ಕೈಬಿಡಲು. ಚಾಲ್ತಿ ತೋಟಗಾರಿಕಾ ಕಾಲೇಜು ಮುಂದುವರಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com