
ಬಂಟ್ವಾಳ: ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ತುಳು, ಕನ್ನಡ ವಿದ್ವಾಂಸರಾಗಿದ್ದ ಡಾ.ವಾಮನ ನಂದಾವರ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರು ಇಂದು ಬೆಳಗ್ಗೆ ಮಂಗಳೂರಿನಲ್ಲಿ ಕೊನೆಯುಸಿರೆಳೆದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು.ಹೆಸರಾಂತ ಜಾನಪದ ವಿದ್ವಾಂಸರಾಗಿದ್ದ ಡಾ. ವಾಮನ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ಬಾಬು ಬಾಳೆಪುಣಿ- ಪೂವಮ್ಮರವರ ಮಗನಾಗಿ 1944ರ ನ.15ರಂದು ಜನಿಸಿದ ಡಾ.ವಾಮನ, ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ ಸರಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್‌ವಿಎಸ್ ಹೈಯರ್ ಎಲಿಮೆಂಟರಿ ಶಾಲೆ, ಕುರ್ನಾಡಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಕುರ್ನಾಡಿನ ಬೋರ್ಡ್ ಹೈಸ್ಕೂಲು, ಕೋಟೆಕಾರಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಮಾಡಿದ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಬಿಎಸ್ಸಿ ಪದವಿ ಪಡೆದರು.
ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎಡ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂಎ (ಕನ್ನಡ), ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಪದವಿ ಪಡೆದಿದ್ದರು.
ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕ, ಸೈಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಬಳಿಕ ಸೈಂಟ್ ಆನ್ಸ್ ಮಹಿಳಾ ಶಿಕ್ಷಕ- ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿ ದುಡಿದಿದ್ದ ಅವರು, ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದರು.
ಡಾ.ವಾಮನ ನಂದಾವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ತುಳು ಅಕಾಡೆಮಿಯ ಅಧ್ಯಕ್ಷತೆಯೂ ಸೇರಿದಂತೆ ಹಲವಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಡಾ.ನಂದಾವರ ಅವರು ತುಳು ಮತ್ತು ಕನ್ನಡ ಜಾನಪದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
Advertisement