ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧ ಶೃಂಗಸಭೆ-2025 ಅನ್ನು ಪರಮೇಶ್ವರ್ ಉದ್ಘಾಟಿಸಿದರು. ವಿಧಾನಸಭಾ ಅಧಿವೇಶನದ ಎರಡು ವಾರಗಳಲ್ಲಿ ಸುಮಾರು 6ಕ್ಕಿಂತಲೂ ಹೆಚ್ಚಿನ ಪ್ರಶ್ನೆಗಳು ಸೈಬರ್ ಅಪರಾಧ ಕುರಿತಂತೆ ಕೇಳಿಬಂದಿವೆ. ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಬದ್ಧವಾಗಿದೆ ಎಂದರು. 2024ರಲ್ಲಿ ದಾಖಲಾದ 20 ಸಾವಿರ ಪ್ರಕರಣಗಳಲ್ಲಿ ಕೇವಲ 1,248 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಸೈಬರ್ ಅಪರಾಧಗಳಿಗೆ ಸುಮಾರು 2,900 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಎರಡು ಪ್ರತ್ಯೇಕ ಗ್ಯಾಂಗ್ನಿಂದ ದಲಿತ ಮುಖಂಡ ಹಾಗೂ ಆತನ ಸಹಚರನ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಬಳಿ ನಡೆದಿದೆ. ಮದ್ದರಕಿ ಗ್ರಾಮದ ಮಾಪಣ್ಣ ಹಾಗೂ ಅಲಿಸಾಬ್ ಎಂಬುವರನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಶಹಾಪುರದಲ್ಲಿ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಮಾತನಾಡಿದ್ದು, ಸಾದ್ಯಾಪುರ ಕ್ರಾಸ್ ಬಳಿ ಬೆಳಗ್ಗೆ 9.30ರ ಸುಮಾರಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಮಾಪಣ್ಣನ ಕೊಲೆಯಾಗಿತ್ತು. ಈ ವೇಳೆ ಜೊತೆಗಿದ್ದ ಅಲಿಸಾಬ್ ಅಲ್ಲಿಂದ ಓಡಿಹೋಗಿದ್ದನು. ಮಾಪಣ್ಣನನ್ನು ರೌಡಿಶೀಟರ್ ಹುಸೇನಿ ಕೊಂದಿರುವ ಮಾಹಿತಿ ಇದೆ. ಇನ್ನು ಮಾಪಣ್ಣ ಕುರಿತು ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ಅಲಿಸಾಬ್ನನ್ನು ಮಾಪಣ್ಣನ ಮಕ್ಕಳು ಕೊಂದಿದ್ದಾರೆ ಎನ್ನಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಹೋಳಿ ಪಾರ್ಟಿಯಲ್ಲಿ ಉಳಿದಿದ್ದ ಆಹಾರವನ್ನು ಸೇವಿಸಿ 29 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಆ ಪೈಕಿ 13 ವರ್ಷದ ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಮಂಡ್ಯದ ಮಳವಳ್ಳಿಯ ಟಿ ಕಾಗೇಪುರ ಗ್ರಾಮದ ಗೋಕುಲ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲೆ ನಡೆಸುತ್ತಿರುವ ಅನಧಿಕೃತ ಹಾಸ್ಟೆಲ್‌ನಲ್ಲಿ ವಿಷ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಯನ್ನು ಮೇಘಾಲಯ ಮೂಲದ ಕೆರ್ಲಾಂಗ್ ಎಂದು ತಿಳಿದುಬಂದಿದೆ. ಈ ಘಟನೆ ಸಂಬಂಧ ಹಾಸ್ಟೆಲ್ ವಾರ್ಡನ್ ಮತ್ತು ನಿರ್ಲಕ್ಷ್ಯಕ್ಕಾಗಿ ಶಾಲಾ ಮಾಲೀಕರನ್ನು ಬಂಧಿಸಲಾಗಿದೆ. ವಿದ್ಯಾರ್ಥಿ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಇತಿಹಾದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಸುಮಾರು 75 ಕೋಟಿ ರೂ ಮೌಲ್ಯದ 37.87 ಕೆ ಜಿ ತೂಕದ MDMA ಡ್ರಗ್ಸನ್ನು ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯಕ್ಕೆ ಮತ್ತು ಇತರ ಸ್ಥಳಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಪ್ರಜೆಗಳಾದ 31 ವರ್ಷದ ಬಂಬಾ ಫಂಟಾ ಮತ್ತು 30 ವರ್ಷದ ಅಬಿಗೈಲ್ ಅಡೊನಿಸ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು ಅವರ ಬಳಿಯಿದ್ದ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಪತ್ತೆಯಾಗಿದ್ದು, ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬಿಡದಿಯ ಟೊಯೋಟಾ ಬುಶೋಕುನಲ್ಲಿ ಕಿಡಿಗೇಡಿಗಳು ಶಾಚಾಲಯದ ಗೋಡೆಯಲ್ಲಿ ಪಾಕಿಸ್ತಾನ ಜೈ, ಕನ್ನಡಿಗರು ಸೂ,…ಮಕ್ಕಳು ಎಂದು ಬರೆದಿದ್ದು ಮಾರ್ಚ್ 15 ರಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಕಂಪನಿ ಸುತ್ತೋಲೆ ಹೊರಡಿಸಿದ್ದು, ಯಾರೇ ಕಿಡಿಗೇಡಿ ಇದ್ದರೂ ಕಠಿಣ ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಭಯೋತ್ಪಾದಕ ಕೃತ್ಯ ಎಸಗಿರುವ ಕಿಡಿಗೇಡಿ ವಿರುದ್ಧ ಗಂಭೀರ ಪ್ರಕರಣ ದಾಖಲು ಮಾಡಬೇಕು. ಕಿಡಿಗೇಡಿಯನ್ನು ಗಡಿಪಾರು ಮಾಡಬೇಕು. ಪ್ರಕರಣ ಮುಚ್ಚಾಕಲು ಯತ್ನಿಸಿದ್ದ ಆಡಳಿತ ಮಂಡಳಿ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಕನ್ನಡ ಮಂಜು ಆಗ್ರಹಿಸಿದರು.
Advertisement